ಕಲಬುರಗಿ | ಅಪಘಾತ ಖಂಡಿಸಿ ಹೋರಾಟ ನಡೆಸಿದ 6 ಜನರ ವಿರುದ್ಧ ಪ್ರಕರಣ ದಾಖಲು
ಕಲಬುರಗಿ : ರಿಂಗ್ ರೋಡ್ ಪ್ರದೇಶದ ಹಾಗರಗಾ ಕ್ರಾಸ್ ನಲ್ಲಿ ಪ್ರತಿಭಟನೆ ನಡೆಸಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿರುವುದಾಗಿ ಆರೋಪಿಸಿ ಇಲ್ಲಿನ ರೋಜಾ ಪೊಲೀಸ್ ಠಾಣೆಯ ಪೊಲೀಸರು ಜನತಾ ಪರಿವಾರ ಸಂಘಟನೆಯ ಇಬ್ಬರು ಮುಖಂಡರು ಸೇರಿ 6 ಜನರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.
ಜನತಾ ಪರಿವಾರ ಸಂಘಟನೆಯ ಮುಖಂಡರಾದ ಶಿರಾಜ್ ಶಾಬ್ದಿ, ಖಾಲಿದ್ ಅಬ್ರಾರ್ ಮತ್ತು ನಜೀರ್ ಅಹ್ಮದ್, ಸೈಯದ್ ತಬ್ರೆಜ್, ಮೊಹಸಿನ್ ಅಹ್ಮದ್ ಹಾಗೂ ಸೈಯದ್ ಮೊಹಿನ್ ಅವರ ಮೇಲೆ 41/2025 : ಕಲಂ 189 (2), 191(2), 285 ಸಂಗಡ 190 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಶನಿವಾರ ರಿಂಗ್ ಪ್ರದೇಶದ ಹಾಗರಗಾ ಕ್ರಾಸ್ ಹತ್ತಿರ ಬೈಕ್ ಮತ್ತು ಲಾರಿ ಢಿಕ್ಕಿಯಾಗಿ ಮೃತಪಟ್ಟ ಅಬ್ದುಲ್ ನಬಿ ಕುಟುಂಬಕ್ಕೆ ನ್ಯಾಯ ಮತ್ತು ಸೂಕ್ತ ಪರಿಹಾರ ಹಾಗೂ ಸಬ್ ರಿಂಗ್ ರೋಡ್ ಕಾಮಗಾರಿ ಪೂರ್ಣಗೊಳಿಸಬೇಕೆಂದು ಆಗ್ರಹಿಸಿ ರಸ್ತೆಯ ಮೇಲೆ ನಿಂತುಕೊಂಡು ಸಾರ್ವಜನಿಕರಿಗೆ ಮತ್ತು ವಾಹನಗಳಿಗೆ ತೊಂದರೆಯನ್ನುಂಟು ಮಾಡಿ ಖರ್ಗೆ ಪೆಟ್ರೋಲ್ ಬಂಕ್ ನಿಂದ ಹುಮನಾಬಾದ್ ಕ್ರಾಸ್ ಗೆ ಹೋಗುವ ಮುಖ್ಯ ರಸ್ತೆ ಸಂಚಾರಕ್ಕೆ ಅಡೆತಡೆ ಉಂಟಾಗಿರುವ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.