×
Ad

ಕಲಬುರಗಿ| ಭೂಸನೂರ ಕಾರ್ಖಾನೆಯ ಆಡಳಿತ ಮಂಡಳಿ ಚುನಾವಣೆಯಲ್ಲಿ ಗೊಂದಲ; ಚುನಾವಣೆ ಮುಂದೂಡಿಕೆ

Update: 2025-12-04 00:09 IST

ಕಲಬುರಗಿ: ಭೂಸನೂರದ ಆಳಂದ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಗೆ ನಡೆದ ಸದಸ್ಯರ ಚುನಾವಣೆಯಲ್ಲಿ ಮತಪತ್ರ ಬೇರೆ ನೀಡಿದ್ದಕ್ಕೆ, ಮತ ಪ್ರಕ್ರಿಯೆಯಲ್ಲಿ ಗೊಂದಲ ಮೂಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದು, ಚುನಾವಣೆ ಮುಂದೂಡಿರುವ ಘಟನೆ ಬುಧವಾರ ನಡೆದಿದೆ.

ನಗರದ ವಿಶ್ವಾರಾಧ್ಯ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಆಡಳಿತ ಮಂಡಳಿ ಸದಸ್ಯರ ಚುನಾವಣೆಯಲ್ಲಿ 14 ಸದಸ್ಯರ ಸ್ಥಾನಕ್ಕೆ 28 ಜನ ಸ್ಪರ್ಧಿಸಿದ್ದು, 6 ಬೂತ್ ಗಳಲ್ಲಿ ಬೆಳಗ್ಗೆ 9 ಗಂಟೆಯಿಂದ ಮತದಾನ ನಡೆಯುತ್ತಿತ್ತು. ಮಧ್ಯಾಹ್ನ 2 ಗಂಟೆ ಸುಮಾರಿಗೆ ಒಂದನೇ ಬೂತ್ನಲ್ಲಿ ಕಾರ್ಖಾನೆ ಆಡಳಿತ ಮಂಡಳಿ ಮತಪತ್ರಕ್ಕೆ ಬದಲಾಗಿ, ಇತ್ತೀಚೆಗೆ ಜರುಗಿದ ಜನತಾ ಬಜಾರ್ ಚುನಾವಣೆಯ ಮತಪತ್ರ ನೀಡಲಾಗಿದೆ. ಇದಕ್ಕೆ ರೈತರು ವಿರೋಧ ಪಡಿಸಿದ್ದಾರೆ.

ಮತಪತ್ರ ಬದಲಾಯಿಸುತ್ತೇವೆ, ಲೋಪ ಸರಿಪಡಿಸುತ್ತೇವೆ ಎಂದು ಚುನಾವಣೆ ಅಧಿಕಾರಿಗಳು ಕೇಳಿದ್ದಾರೆ. ಇದಕ್ಕೆ ಒಪ್ಪದ ರೈತರು ಬಿಜೆಪಿ ಮುಖಂಡ ಹರ್ಷಾನಂದ ಗುತ್ತೇದಾರ್ ನೇತೃತ್ವದಲ್ಲಿ ಇಡೀ ಚುನಾವಣೆಯೇ ಅಕ್ರಮ ನಡೆದಿದ್ದು, ಪುನಃ ಚುನಾವಣೆ ನಡೆಸಬೇಕು ಎಂದು ಚುನಾವಣಾಧಿಕಾರಿಗಳ ಜತೆಗೆ ವಾಗ್ವಾದ ನಡೆಸಿ, ಮತಗಟ್ಟೆ, ಮತಡಬ್ಬಿಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ ಎನ್ನಲಾಗಿದೆ.

ವಾಗ್ವಾದ ನಡೆಸಿ ಆಳಂದದ ಹೆದ್ದಾರಿ ಮೇಲೆ ನೂರಾರು ಜನರೊಂದಿಗೆ ಹರ್ಷಾನಂದ ಗುತ್ತೇದಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಅಧಿಕಾರಿಗಳು ಅಧಿಕೃತವಾಗಿ ಘೋಷಿಸುವವರೆಗೆ ಪಟ್ಟು ಹಿಡಿದ ಪ್ರತಿಭಟನಾಕಾರರು ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಟ್ಟರು.

ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡ ಶಾಸಕ: ಹರ್ಷಾನಂದ ಗುತ್ತೇದಾರ್ ಆರೋಪ

ಆಳಂದ ಸಹಕಾರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಅಕ್ರಮ ನಡೆಸಲು ಮುಂದಾಗಿದ್ದಾರೆ. ಇಡೀ ಚುನಾವಣೆ ಪ್ರಕ್ರಿಯೆ ಆರಂಭದಿಂದಲೂ ಷಡ್ಯಂತ್ರ ಮಾಡುತ್ತಲೇ ಬಂದಿದ್ದು, ಇದೀಗ ಸೋಲಿನ ಭೀತಿಯಿಂದ ಮತಪತ್ರವನ್ನೇ ಬದಲಾಯಿಸಿದ್ದಾರೆ ಎಂದು ಬಿಜೆಪಿ ಮುಖಂಡ, ಜಿಪಂ ಮಾಜಿ ಸದಸ್ಯ ಹರ್ಷಾನಂದ ಗುತ್ತೇದಾರ್ ಆರೋಪಿಸಿದ್ದಾರೆ.




 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News