ಕಲಬುರಗಿ | ಕುರುಬ ಸಮುದಾಯದ ಪ್ರತಿಭಟನೆಯಲ್ಲಿ ಪತ್ರಕರ್ತರ ಮೇಲೆ ಹಲ್ಲೆಗೆ ಯತ್ನ
ಕಲಬುರಗಿ : ತಾಲ್ಲೂಕಿನ ಮೇಳಕುಂದಾ (ಬಿ) ಗ್ರಾಮದಲ್ಲಿನ ಮಾಳಿಂಗರಾಯ ದೇವಸ್ಥಾನದ ಪೂಜೆಗೆ ಕುರುಬ ಸಮಾಜದ ಪೂಜಾರಿಯನ್ನು ನೇಮಿಸಬೇಕು ಎಂದು ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಕೆಲವರು ಮಾಧ್ಯಮದವರ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ಗುರುವಾರ ನಡೆದಿದೆ.
ನಗರದ ಜಗತ್ ವೃತದಲ್ಲಿ ಕುರುಬ ಸಮಾಜದ ಜಿಲ್ಲಾಧ್ಯಕ್ಷ ಗುರುನಾಥ ಪೂಜಾರಿ, ಬಸವರಾಜ ಮದ್ರಿಕಿ, ಭಗವಂತರಾಯ ಪಾಟೀಲ್, ತಮ್ಮಣ್ಣ ಭಾಗೇವಾಡಿ, ನಿಂಗಣ್ಣ ರದ್ದೇವಡಗಿ, ವಿಠ್ಠಲ ಪೂಜಾರಿ, ಈರಣ್ಣ ಧಂಗಾಪುರ, ಶಿವಲಿಂಗಪ್ಪ ಪಟ್ಟಣ ಯಳಸಂಗಿ ಸೇರಿದಂತೆ ಹಲವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯನ್ನು ವರದಿ ಮಾಡಲು ತೆರಳಿದ್ದ 'ವಾರ್ತಾಭಾರತಿ' ವರದಿಗಾರ ದಸ್ತಗೀರ ನದಾಫ್ ಸೇರಿದಂತೆ ಇತರೆ ವರದಿಗಾರರು ಮತ್ತು ಅವರ ದ್ವಿಚಕ್ರ ವಾಹನಗಳನ್ನು ತಡೆದು, ಜಖಂಗೊಳಿಸಲು ಯತ್ನಿಸಿದ್ದಾರೆ.
'ನಾವು ಪತ್ರಕರ್ತರಾಗಿದ್ದು, ಪ್ರತಿಭಟನೆಯ ಸುದ್ದಿಯನ್ನು ವರದಿ ಮಾಡಲು ಬಂದಿದ್ದೇವೆʼ ಎಂದರೂ ಕೆಲವರು 'ನೀವು ಮೀಡಿಯಾ ಆದರೇನು, ಯಾರಾದರೇನು? ಇಲ್ಲಿಂದ ಹೋಗಿ ಎಂದು ಪ್ರತಿವಾದ ನಡೆಸಿ, ಪತ್ರಕರ್ತರೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ಪತ್ರಕರ್ತರು ತಿಳಿಸಿದ್ದಾರೆ.
ಅಲ್ಲದೆ, ಪ್ರತಿಭಟನೆಯಲ್ಲಿ ಕಟ್ಟಿಗೆ ತುಂಡಿನಿಂದ ಹಲ್ಲೆಗೆ ಯತ್ನಿಸಿರುವ ಘಟನೆ ನಡೆದಿದೆ. ಈ ಕುರಿತು ಸುದ್ದಿ ಮಾಧ್ಯಮದ ವರದಿಗಾರರು ಮತ್ತು ಪ್ರತಿಭಟನಕಾರರ ನಡುವೆ ವಾಗ್ವಾದ ನಡೆದಿದ್ದು, ಸ್ಥಳದಲ್ಲೇ ಇದ್ದ ಪೊಲೀಸರು ಕೈಕಟ್ಟಿ ನಿಂತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಈ ಕುರಿತಾದ ವಿಡಿಯೋ ವೈರಲ್ ಆಗಿದೆ.