ಕಲಬುರಗಿ | ತಾರಫೈಲ್ ಬಡಾವಣೆಗೆ ವಿವಿಧ ಸೌಲಭ್ಯ ಕಲ್ಪಿಸಲು ಆಯುಕ್ತರಿಗೆ ಮನವಿ
ಕಲಬುರಗಿ : ಮಹಾನಗರ ಪಾಲಿಕೆ ವಾರ್ಡ್ ನಂ.54ರ ವ್ಯಾಪ್ತಿಯ ತಾರಫೈಲ್ ಬಡಾವಣೆಯ ವಾರ್ಡ್ ನಂ.14ನೇ ಕ್ರಾಸ್ ಗುಡ್ ಶೇಫರ್ಡ ಮೆಥೋಡಿಸ್ಟ್ ಚರ್ಚ್ ಏರಿಯಾದಲ್ಲಿ ಸಿ.ಸಿ.ರಸ್ತೆಗೆ ಒಳಚರಂಡಿ ಕಾಮಗಾರಿಗಳು ಮಂಜೂರು ಮಾಡಿ ಮೂಲಭೂತ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ಕರುನಾಡ ವಿಜಯಸೇನೆ ಅಧ್ಯಕ್ಷ ಪೃಥ್ವಿರಾಜ ಎಸ್.ರಾಂಪೂರ ನೇತೃತ್ವದಲ್ಲಿ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಮಹಾನಗರ ಪಾಲಿಕೆ ವಾರ್ಡ್ ನಂ.54ರ ವ್ಯಾಪ್ತಿಯ ತಾರಫೈಲ್ ಬಡಾವಣೆಯ 14ನೇ ಕ್ರಾಸ್ ಗುಡ್ ಶೇಫರ್ಡ ಮೆಥೋಡಿಸ್ಟ್ ಚರ್ಚ್ ಏರಿಯಾದಲ್ಲಿ ಸಿ.ಸಿ.ರಸ್ತೆ, ಒಳಚರಂಡಿ ಕಾಮಗಾರಿಗಳು ಮಂಜೂರು ಮಾಡಬೇಕು. ಇಲ್ಲಿನ ಸಾರ್ವಜನಿಕರಿಗೆ ಸಮರ್ಪಕ ರಸ್ತೆ ಹಾಗೂ ಒಳಚರಂಡಿಗಳ ಸೌಲಭ್ಯವಿಲ್ಲದೇ ತುಂಬಾ ತೊಂದರೆಯಾಗುತ್ತಿದೆ ಎಂದು ಹೇಳಿದ್ದಾರೆ.
ಬಡಾವಣೆಯ ದೇವರಾಜ ನೂಲಕರ ಮನೆಯಿಂದ ಶಂಕರ ಗುಡೂರ ಮನೆಯವರೆಗೆ ಒಟ್ಟು 60 ಮೀಟರ್ ಸಿ.ಸಿ.ರಸ್ತೆ ಮತ್ತು ಒಳಚರಂಡಿ ನಿರ್ಮಾಣ, ದೇವಿಂದ್ರಪ್ಪ ಉಳೆಸೂಗುರ ಮನೆಯಿಂದ ಶ್ರೀಧರ ಹುಲಿಮನೆಯವರಿಗೆ ಒಟ್ಟು 120 ಮೀಟರ್ ಸಿ.ಸಿ.ರಸ್ತೆ ಮತ್ತು ಒಳಚರಂಡಿ ನಿರ್ಮಾಣ ಮಾಡಬೇಕು. ಕಾಮಗಾರಿಗಳು ಕೈಗೆತ್ತಿಕೊಂಡು ಬಡಾವಣೆಯ ನಾಗರಿಕರಿಗೆ ಅನುಕೂಲ ಮಾಡಿಕೊಡಬೇಕು. ಒಂದು ವೇಳೆ ನಮ್ಮ ಮನವಿಗೆ ಸ್ಪಂದಿಸದಿದ್ದರೆ ನಮ್ಮ ಸಂಘಟನೆಯೊಂದಿಗೆ ಬಡಾವಣೆಯ ನಾಗರಿಕರನ್ನು ಸೇರಿಸಿ ತಮ್ಮ ಕಚೇರಿಯ ಮುಂದೆ ಧರಣಿ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಗೌರವಾಧ್ಯಕ್ಷ ಉಸ್ಮಾನ್ ಸಾಬ್ ನೇಲೋಗಿ, ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷೆ ರತ್ನಮ್ಮ ಶಂಕರ ಗೌಡ, ನಗರಾಧ್ಯಕ್ಷ ರಾಜು ಹೆಚ್ ಗುಂಟ್ರಾಳ, ತಾಲೂಕು ಅಧ್ಯಕ್ಷ ಕಲ್ಯಾಣಿ ಎಸ್.ತಳವಾರ, ಚಿಂಚೋಳಿ ತಾಲೂಕು ಅಧ್ಯಕ್ಷ ಪಾವನ, ಸೈಬಣ್ಣ ಪರಶುರಾಮನ ಹಳ್ಳಿ, ದೇವರಾಜ ಸೇರಿದಂತೆ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.