ಕಲಬುರಗಿ | ಆರ್.ಟಿ.ಐ. ಕಾರ್ಯಕರ್ತನಿಗೆ ಹಲ್ಲೆ ಯತ್ನ: ಮೂವರ ವಿರುದ್ಧ ಪ್ರಕರಣ ದಾಖಲು
ಕಲಬುರಗಿ: ಆರ್.ಟಿ.ಐ. ಕಾರ್ಯಕರ್ತನಿಗೆ ಹಲ್ಲೆಗೆ ಯತ್ನಿಸಿರುವ ಆರೋಪದಲ್ಲಿ ಖಾಸಗಿ ಸುದ್ದಿವಾಹಿನಿಯ ವರದಿಗಾರ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಸಂಜಯ್ ಅಲಿಯಾಸ್ ಸಂಜು, ಕಾಂಗ್ರೆಸ್ ಮುಖಂಡ ರಾಜೀವ ಜಾನೆ ಮತ್ತು ಪಬ್ಲಿಕ್ ಟಿವಿಯ ಕಲಬುರಗಿ ವರದಿಗಾರ ಪ್ರವೀಣ್ ರೆಡ್ಡಿ ಎಂಬವರ ವಿರುದ್ಧ ಸ್ಟೇಶನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮಾಹಿತಿ ಹಕ್ಕು ಕಾರ್ಯಕರ್ತ ಸಿದ್ರಾಮಯ್ಯ ಶಂಭುಲಿಂಗಯ್ಯ ಹಿರೇಮಠ ಎಂಬವರು ನೀಡಿದ ದೂರಿನನ್ವಯ ನ್ಯಾಯಾಲಯದ ಆದೇಶದಂತೆ ಇಲ್ಲಿನ ಸ್ಟೇಶನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
2024ರ ನ.15ರಂದು ಸಿದ್ರಾಮಯ್ಯ ಕಾರಿನಲ್ಲಿ ಹಳೇ ಜೇವರ್ಗಿ ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಅಲ್ಲಿನ ಮಹಿಳಾ ಪದವಿ ಕಾಲೇಜಿನಲ್ಲಿ ರಾಂಗ್ ಸೈಡ್ ನಿಂದ ಬೈಕ್ ಮೇಲೆ ಬಂದ ಸಂಜಯ್ ಹಾಗೂ ಇತರರು ಬಾಗಿಲು ತೆರೆಯುವಂತೆ ಕಾರಿನ ಗ್ಲಾಸ್ಗೆ ಕೈಯಿಂದ ಹೊಡೆದಿದ್ದಾನೆ. ತನ್ನ ಮೇಲೆ ಹಲ್ಲೆ ನಡೆಸುವ ಉದ್ದೇಶದಿಂದ ಅವರು ಸಿದ್ಧರಾಗಿ ಬಂದಿದ್ದರು. ಅದೇ ವೇಳೆಯಲ್ಲೇ ನಿಂದಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
'ನಾನು ಆರ್.ಟಿ.ಐ ಕಾರ್ಯಕರ್ತನಾಗಿದ್ದು, ಸಂಜಯ್ ತನಗೆ ಪರಿಚಿತನಲ್ಲ. ನನ್ನ ಹತ್ಯೆಗೆ ಸಂಚು ರೂಪಿಸಿರುವ ರಾಜೀವ ಜಾನೆ ಹಾಗೂ ಪತ್ರಕರ್ತ ಪ್ರವೀಣ್ ರೆಡ್ಡಿ ಅವರು ಸಂಜಯನನ್ನು ಕಳುಹಿಸಿ, ನನ್ನ ಕೊಲೆಗೆ ಯತ್ನಿಸಿದ್ದಾರೆ' ಎಂದು ಹಿರೇಮಠ ದೂರಿನಲ್ಲಿ ಆರೋಪಿಸಿದ್ದಾರೆ.
ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದರೂ ಪ್ರಕರಣ ದಾಖಲಿಸಿಕೊಂಡಿರದ ಹಿನ್ನೆಲೆಯಲ್ಲಿ ಸಿದ್ರಾಮಯ್ಯ ಶಂಭುಲಿಂಗಯ್ಯ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯದ ಆದೇಶದಂತೆ ಆರೋಪಿಗಳ ವಿರುದ್ಧ ಬುಧವಾರ ಪ್ರಕರಣ ದಾಖಲಾಗಿದೆ.