×
Ad

ಕಲಬುರಗಿ | 'ಹರಸೂರಿನ ಇತಿಹಾಸ’ ಕುರಿತು ಪುಸ್ತಕ ಬಿಡುಗಡೆ

Update: 2025-12-29 19:07 IST

ಕಲಬುರಗಿ: ಹರಸೂರು ಕೇವಲ ಒಂದು ಗ್ರಾಮವಲ್ಲ, ಅದು ನಮ್ಮ ಸಂಸ್ಕೃತಿ, ಪರಂಪರೆ, ಧಾರ್ಮಿಕ ನಂಬಿಕೆಗಳು ಹಾಗೂ ಶೌರ್ಯಗಾಥೆಗಳ ಜೀವಂತ ಸಾಕ್ಷಿಯಾಗಿದೆ. ಈ ಊರಿನ ಇತಿಹಾಸವನ್ನು ಸಂಗ್ರಹಿಸಿ, ಸಂಶೋಧಿಸಿ, ಪುಸ್ತಕ ತಂದಿರುವುದು ಹೆಮ್ಮೆಯ ಸಂಗತಿ ಎಂದು ಮಾಜಿ ಸಚಿವ ಎಸ್.ಕೆ.ಕಾಂತಾ ಹೇಳಿದರು.

ಕಮಲಾಪುರ ತಾಲ್ಲೂಕಿನ ಹರಸೂರಿನ ಸಿದ್ದರಾಮೇಶ್ವರ ದೇವಸ್ಥಾನದಲ್ಲಿ ಶಿವಶಂಕರ ಚಂದ್ರಶೆಟ್ಟಿ ಕಾಂತಾ ಹರಸೂರು ಅವರು ಬರೆದ ಹರಸೂರಿನ ಇತಿಹಾಸ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇತಿಹಾಸವೆಂದರೆ ಕೇವಲ ಭೂತಕಾಲದ ಕಥೆಯಲ್ಲ. ಅದು ನಮ್ಮ ಇಂದಿನ ಬದುಕಿಗೆ ದಾರಿ ತೋರಿಸುವ ದೀಪವಾಗಿದೆ. ನಮ್ಮ ಪೂರ್ವಜರ ತ್ಯಾಗ, ಶ್ರಮ, ಮೌಲ್ಯಗಳು ಮತ್ತು ಸಾಧನೆಗಳು ಈ ಪುಸ್ತಕದ ಮೂಲಕ ಮುಂದಿನ ಪೀಳಿಗೆಗೆ ತಲುಪುತ್ತಿರುವುದು ಅತ್ಯಂತ ಮಹತ್ವದ ಸಂಗತಿಯಾಗಿದೆ. ಹರಸೂರಿನ ದೇವಾಲಯಗಳು, ಜಾತ್ರೆಗಳು, ಸಾಮಾಜಿಕ ಏಕತೆ, ಕೃಷಿ ಸಂಸ್ಕೃತಿ ಮತ್ತು ಸ್ವಾತಂತ್ರ‍್ಯ ಹೋರಾಟದ ಪಾತ್ರ ಇವುಗಳನ್ನು ಈ ಗ್ರಂಥದಲ್ಲಿ ದಾಖಲಿಸಿರುವುದು ಶ್ಲಾಘನೀಯ ಎಂದರು.

ಇದು ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಗ್ರಾಮಾಭಿವೃದ್ಧಿಗೆ ಆಸಕ್ತಿ ಇರುವ ಎಲ್ಲರಿಗೂ ಮಾರ್ಗದರ್ಶಕ ಗ್ರಂಥವಾಗಲಿದೆ. ಇಂತಹ ಇತಿಹಾಸ ಗ್ರಂಥಗಳು ನಮ್ಮ ಸ್ಥಳೀಯ ಸಂಸ್ಕೃತಿಯನ್ನು ಉಳಿಸುವುದರ ಜೊತೆಗೆ, ಯುವ ಪೀಳಿಗೆಯಲ್ಲಿ ಗ್ರಾಮಾಭಿಮಾನ ಮತ್ತು ದೇಶಾಭಿಮಾನ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.

ಕಾರ್ಯಕ್ರಮದಲ್ಲಿ ಹರಸೂರಿನ ಕಲ್ಮಠದ ಷ..ಬ್ರ. ಶ್ರೀ ಕರಿಸಿದ್ದೇಶ್ವರ ಸ್ವಾಮಿಜೀ ದಿವ್ಯ ಸಾನಿಧ್ಯ ವಹಿಸಿದ್ದರು, ಹರಸೂರಿನ ಪರ್ವತಲಿಂಗೇಶ್ವರಮಠದ ಷ.ಬ್ರ. ಶ್ರೀ ಸಿದ್ದರಾಮ ಶಿವಾಚಾರ್ಯರು ನೇತೃತ್ವ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿಗಳಾದ ವಿಶ್ವನಾಥ ಬಸಪ್ಪ ಡೊಣ್ಣೂರ್, ಗೋದುತಾಯಿ ದೊಡ್ಡಪ್ಪ ಅಪ್ಪ ಮಹಿಳಾ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ.ಶಾಂತಲಿಂಗ ಘಂಟೆ ಪುಸ್ತಕ ಪರಿಚಯಿಸಿದರು.

ಬಸವರಾಜ ಎಸ್.ಸಮಾಳ ಸ್ವಾಗತಿಸಿ, ನಿರೂಪಿಸಿದರು. ವೇದಿಕೆ ಮೇಲೆ ಮುಖಂಡ ಶಿವಕಾಂತ ಮಹಾಜನ, ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ಮತ್ತಿರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News