ಕಲಬುರಗಿ| ಕಾಂಗ್ರೆಸ್ ದಲಿತರನ್ನು ಕೇವಲ ಮತಬ್ಯಾಂಕ್ ಆಗಿ ಬಳಸುತ್ತಾ ಬಂದಿದೆ: ಮಾಜಿ ಸಚಿವ ಎನ್.ಮಹೇಶ್ ಆರೋಪ
ಕಲಬುರಗಿ: 75 ವರ್ಷಗಳಿಂದ ದಲಿತ ಸಮುದಾಯವನ್ನು ಮತಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿರುವ ಕಾಂಗ್ರೆಸ್ ಈವರೆಗೆ ಯಾಕೆ ರಾಜ್ಯದಲ್ಲಿ ದಲಿತ ಸಿಎಂ ಮಾಡಲಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಎನ್ ಮಹೇಶ್ ಪ್ರಶ್ನಿಸಿದ್ದಾರೆ.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎನ್ ಮಹೇಶ್, ಕಾಂಗ್ರೆಸ್ ಇಲ್ಲಿಯವರೆಗೆ ದಲಿತರನ್ನು ಕೇವಲ ಮತಬ್ಯಾಂಕ್ ಆಗಿ ಬಳಸುತ್ತಾ ಬಂದಿದ್ದು, ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡುವ ವಿಚಾರದಲ್ಲಿ ಪಕ್ಷವು ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಸ್.ಎಂ.ಕೃಷ್ಣ ಅವರ ಅವಧಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದರು. ಆದರೆ, ಅವರಿಗೆ ಸಿಎಂ ಸ್ಥಾನ ನೀಡದೆ ಹೊರಗಿಡಲಾಯಿತು. ಜಿ. ಪರಮೇಶ್ವರ್ ಅವರು ಸಹ ಪಕ್ಷವನ್ನು ಅಧಿಕಾರಕ್ಕೆ ತಂದರು. ಅವರನ್ನು ಷಡ್ಯಂತ್ರ ಮಾಡಿ ಸೋಲಿಸಿದರು. ಹೀಗೆ ದಲಿತರು ಹೇಗಿದ್ದರೂ ಕಾಂಗ್ರೆಸ್‌ಗೆ ಮತ ಹಾಕುತ್ತಾರೆ ಎಂಬ ಕಾರಣಕ್ಕೆ ದಲಿತರಿಗೆ ಸಿಎಂ ಸ್ಥಾನ ನೀಡಲು ಪಕ್ಷ ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ದಲಿತರಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಲಾಗಿದೆ. ಯೋಜನೆಗಳಿಗೆ ನಾವು ವಿರೋಧಿಸುತ್ತಿಲ್ಲ. ಆದರೆ ದಲಿತರಿಗೆ ಮೀಸಲಿಟ್ಟ ಹಣವನ್ನು ಇತರ ಯೋಜನೆಗಳಿಗೆ ಯಾಕೆ ಬಳಸಿಕೊಳ್ಳುತ್ತಿದ್ದಾರೆ. ಅನುದಾನ ಬೇರೆ ಕಡೆ ಉಪಯೋಗಿಸುವುದರಿಂದ ದಲಿತರಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿದರು.
1975ರ ತುರ್ತು ಪರಿಸ್ಥಿತಿ,1951ರಲ್ಲಿ ಮಾಧ್ಯಮಗಳ ಮೇಲೆ ನಿರ್ಬಂಧ ಹೆರಲು ಮಾಡಿದ ತಿದ್ದುಪಡಿ ಸೇರಿದಂತೆ ಕಾಂಗ್ರೆಸ್ ತನ್ನ ಅಧಿಕಾರಾವಧಿಯಲ್ಲಿ 76 ಬಾರಿ ಸಂವಿಧಾನ ತಿದ್ದುಪಡಿ ಮಾಡಿ, ಪ್ರಜಾಪ್ರಭುತ್ವಕ್ಕೆ ಧಕ್ಕೆ ತಂದಿದೆ ಎಂದು ಆರೋಪ ಮಾಡಿದರು.
2015ರ ವರ್ಷದಿಂದ ಬಿಜೆಪಿ ನ.26ನೆಯ ದಿನಾಂಕದಿಂದ ಡಿಸೆಂಬರ್ 6ವರೆಗೆ ಸಂವಿಧಾನ ಜಾಗೃತಿ ಅಭಿಯಾನ ಮಾಡುತ್ತಿದೆ. 2014ರಲ್ಲಿ ಬಿಜೆಪಿ ಸರಕಾರ ಬಂದಾಗಿನಿಂದ ಸಂವಿಧಾನ ದಿನಾಚರಣೆ ಮಾಡಲಾಗುತ್ತಿದೆ. ಈ ವರ್ಷವೂ ಕೂಡ 'ಭೀಮನಡೆ ಅಭಿಯಾನ' ನಡೆಸುವ ಮೂಲಕ ಸಂವಿಧಾನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಜಾಗೃತಿ ಅಭಿಯಾನವು ಕಲಬುರಗಿ ವಿಭಾಗದಲ್ಲಿ ಪ್ರತಿ ಜಿಲ್ಲೆ, ತಾಲೂಕಿನಲ್ಲೂ ಅಭಿಯಾನ ನಡೆಯಲಿದ್ದು, ಶಾಸಕ ಬಸವರಾಜ್ ಮತ್ತಿಮಡು ಮತ್ತು ಒಬಿಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಅವ್ವಣ್ಣ ಮ್ಯಾಕೇರಿ ಅವರಿಗೆ ನೇತೃತ್ವ ವಹಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಬಸವರಾಜ ಮತ್ತಿಮಡು, ಅವಿನಾಶ್ ಜಾಧವ್, ವಿಶಾಲ ದರ್ಗಿ, ಅಶೋಕ್ ಬಗಲಿ, ಅವ್ವಣ್ಣ ಮ್ಯಾಕೆರಿ, ಶರಣಪ್ಪ ತಳವಾರ, ಅಂಬಾರಯಾ ಅಷ್ಟಾಗಿ, ರಾಜು ವಾಡೇಕರ್, ದಿಲೀಪ್ ಪಾಟೀಲ್, ಅಶೋಕ್, ಲಿಂಗರಾಜ್ ಬಿರಾದಾರ, ಸಂತೋಷ್ ಹಾದಿಮನಿ, ಬಾಬುರಾವ್ ಹಾಗರಗುಂಡಗಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.