ಕಲಬುರಗಿ | ಕೇಂದ್ರೀಯ ವಿವಿಯಲ್ಲಿ ಗೋರಿಗಳ ನಿರ್ಮಾಣ : ಸುಳ್ಳು ಸುದ್ದಿ ಬಿತ್ತರಿಸಿದ ಮಾಧ್ಯಮಗಳು
ಕಲಬುರಗಿ : ಆಳಂದ ತಾಲ್ಲೂಕಿನ ಕಡಗಂಚಿ ಗ್ರಾಮದ ಸಮೀಪದಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ರಾತ್ರೋ ರಾತ್ರಿ ಅಕ್ರಮ ಗೋರಿಗಳ ನಿರ್ಮಾಣ ಮಾಡಲಾಗಿದೆ ಎಂದು ಕನ್ನಡದ ವಿದ್ಯುನ್ಮಾನ ಮಾಧ್ಯಮಗಳು ಸುಳ್ಳುಸುದ್ದಿ ಹಬ್ಬಿಸಿದ್ದು, ಅಲ್ಲಿ ನೂರಾರು ವರ್ಷಗಳಿಂದಲೂ ಎರಡು ದರ್ಗಾದ ಗೋರಿಗಳು, ಎರಡು ದೇವಸ್ಥಾನಗಳು ಇವೆ ಎಂದು ಸ್ಥಳೀಯರೇ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ʼವಾರ್ತಾಭಾರತಿʼ ತಂಡ ಸ್ಥಳಕ್ಕೆ ಭೇಟಿ ನೀಡಿ ಫ್ಯಾಕ್ಟ್ ಚೆಕ್ ಮಾಡಲು ಮುಂದಾಗಿದ್ದಾಗ ಸಿಯುಕೆಯ ಸುರಕ್ಷಾ ಸಿಬ್ಬಂದಿಗಳು ಒಳಗೆ ಪ್ರವೇಶಕ್ಕೆ ನಿರಾಕರಿಸಿದ್ದರು. ಈ ಕುರಿತು ಕಡಗಂಚಿ ಗ್ರಾಮದ ನಿವಾಸಿ ಜೊತೆ ಮಾತನಾಡಿದಾಗ, ಸಿಯುಕೆ ಆವರಣದಲ್ಲಿರುವ ಗೈಬ್ ಪೀರ್ ಗೋರಿ ಮತ್ತು ಖ್ವಾಜಾ ಬಂದೇ ನವಾಝ್ ಎಂಬ ಎರಡು ಐತಿಹಾಸಿಕ ಸ್ಥಳಗಳು ಇದ್ದು, ಇದರೊಂದಿಗೆ ಆವರಣದಲ್ಲೇ ಲಕ್ಷ್ಮೀ ಹಾಗೂ ಬೀರಲಿಂಗೇಶ್ವರ ದೇವಸ್ಥಾನಗಳು ಇವೆ ಎಂದು ತಿಳಿಸಿದ್ದಾರೆ.
650ಕ್ಕೂ ಹೆಚ್ಚು ಎಕರೆ ಪ್ರದೇಶ ಹೊಂದಿರುವ ಕೇಂದ್ರೀಯ ವಿವಿಯ ಕ್ಯಾಂಪಸ್ ನಲ್ಲಿ ಬಂದೇ ನವಾಝ್ ದರ್ಗಾ, ಗೈಬ್ ಪೀರ್ ದರ್ಗಾ, ಲಕ್ಷ್ಮೀ ದೇವಸ್ಥಾನ ಹಾಗೂ ಬೀರಲಿಂಗೇಶ್ವರ ದೇವಸ್ಥಾನ ಕೂಡ ವಿವಿ ವ್ಯಾಪ್ತಿಯಲ್ಲಿ ಬರುತ್ತವೆ. ಈ ನಾಲ್ಕು ಧಾರ್ಮಿಕ ಕಟ್ಟಡಗಳು ನಾಲ್ಕೈದು ವಾರಗಳ ಹಿಂದೆ ಕಟ್ಟಿಲ್ಲ, ಪುರಾತನ ಕಾಲದಿಂದಲೂ ಅಲ್ಲೇ ಇವೆ. ನನಗೆ 76 ವರ್ಷಗಳು, ಈ ಗೋರಿಗಳು ನಮ್ಮ ಮುತ್ತಾತನ ಕಾಲದಿಂದಲೂ ಇವೆ ಎಂದು ಕಡಗಂಚಿ ಗ್ರಾಮದ ಶಿವಲಿಂಗಪ್ಪ ಪಸಾರೆ ತಿಳಿಸಿದ್ದಾರೆ.
ರಾಜ್ಯದ ಕನ್ನಡ ಮಾಧ್ಯಮಗಳಾದ ಟಿವಿ 9, ರಿಪಬ್ಲಿಕ್ ಕನ್ನಡ, ಪಬ್ಲಿಕ್ ಟಿವಿ, ಗ್ಯಾರಂಟಿ ನ್ಯೂಸ್, B tv ಸೇರಿದಂತೆ ಇನ್ನಿತರ ಮಾಧ್ಯಮಗಳು ʼವಿವಿ ಕ್ಯಾಂಪಸ್ ನಲ್ಲಿ ರಾತ್ರೋ ರಾತ್ರಿ ಗೋರಿಗಳ ನಿರ್ಮಾಣವಾಗಿವೆ. ಅದರ ಕಂಪೌಂಡ್ ಕೆಲಸ ಕೂಡ ನಡೆಯುತ್ತಿದೆ. ಅನಧಿಕೃತ ಗೋರಿ ನಿರ್ಮಾಣ ನಡೆಯುತ್ತಿದೆ, ಪೇಂಟಿಂಗ್ ಮಾಡುತ್ತಿದ್ದಾರೆʼ ಎಂದು ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡಿವೆ. ಇದಕ್ಕೆ ಸ್ಥಳೀಯರಾದ ಹಿಂದೂ ಹಾಗೂ ಮುಸ್ಲಿಂ ಸಮುದಾಯದ ಹಿರಿಯರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮಳೆ ಬರದೇ ಹೋದರೆ ನಮ್ಮ ಗ್ರಾಮಸ್ಥರು, ಗೈಬ್ ಪೀರ್ ದರ್ಗಾ, ಬಂದೇ ನವಾಝ್ ದರ್ಗಾದಲ್ಲಿ ಪ್ರಾರ್ಥನೆ ಮಾಡುತ್ತೇವೆ. ಆ ಸ್ಥಳದಲ್ಲಿ ಅನೇಕರು ಧ್ಯಾನಕ್ಕೆ ಕುಳಿತಿದ್ದಾರೆ ಎಂದು ಸ್ಥಳೀಯ ಹಿರಿಯರೊಬ್ಬರು ಹೇಳಿದ್ದಾರೆ.
►ದರ್ಗಾ ಇದ್ದದ್ದನ್ನು ಡಿ.ಸಿ ಎದುರು ಬಂದರೂ ಹೇಳುತ್ತೇನೆ:
ಈಗ ವಿವಿಯ ವ್ಯಾಪ್ತಿಯಲ್ಲಿರುವ ಗುಡ್ಡದಲ್ಲಿ ಖ್ವಾಜಾ ಬಂದೇ ನವಾಝ್ ಅವರು ಬಂದು ನಮಾಝ್ ಮಾಡಿದ್ದಾರೆ. ಇರುವ ಸತ್ಯವನ್ನು ಹೇಳಲು ನಾನು ಯಾರಿಗೂ ಹಿಂಜರಿಯುವುದಿಲ್ಲ. ಸತ್ಯ ಯಾವಾಗಲೂ ಸತ್ಯವೇ ಆಗಿರುತ್ತದೆ. ಬೇಕಾದರೆ ಕಲಬುರಗಿ ಡಿ.ಸಿ ಅವರು ಎದುರು ಬಂದರೂ ಹೇಳುತ್ತೇನೆ. ಈಗಿರುವ ಗೋರಿಗಳು ನಮ್ಮ ಮುತ್ತಾತನ ಕಾಲದಿಂದಲೂ ಇವೆ ಎಂದು ಹೇಳುತ್ತೇನೆ ಎಂದು ಸ್ಥಳೀಯ ಜಗನ್ನಾಥ ಅವರು ವಿವರಿಸಿದ್ದಾರೆ.
►ಗೋರಿಗಳು ಮೊದಲಿನಿಂದಲೂ ಇವೆ:
ವಿವಿ ಆವರಣದಲ್ಲಿರುವ ಗೋರಿಗಳು ಮೊದಲಿನಿಂದಲೂ ಇವೆ. ಈ ಕುರಿತು ಮಾಧ್ಯಮಗಳಲ್ಲಿ ಬಿತ್ತರಿಸಿದ ಸುದ್ದಿ ನೋಡಿದ್ದೇನೆ. ಪೊಲೀಸರು ನಮ್ಮ ಗಮನಕ್ಕೆ ತಂದಿದ್ದಾರೆ. ಸದ್ಯ ನಾನು ಹೊರಗಡೆ ಇದ್ದೇನೆ. ಸ್ಥಳಕ್ಕೆ ಭೇಟಿ ನೀಡುವೆ.
-ಪ್ರೊ. ಆರ್.ಆರ್ ಬಿರಾದಾರ, ಕುಲಸಚಿವರು, ಕರ್ನಾಟಕ ಕೇಂದ್ರೀಯ ವಿಶ್ವ ವಿದ್ಯಾಲಯ ಕಲಬುರಗಿ.
►ಗೋರಿಗಳಿಗೆ ಭದ್ರತೆ ನೀಡಿದ ವಿವಿ:
ರಾತ್ರೋ ರಾತ್ರಿ ಗೋರಿಗಳ ನಿರ್ಮಾಣ ಆಗಿದೆ ಎಂದು ಕನ್ನಡದ ವಿದ್ಯುನ್ಮಾನ ಮಾಧ್ಯಮಗಳು ಸುಳ್ಳು ಸುದ್ದಿ ಪ್ರಸಾರ ಮಾಡಿದ ಬೆನ್ನಲ್ಲೇ ಗೋರಿಗಳ ಸುತ್ತಮುತ್ತಲೂ ಭದ್ರತೆ ನಿಯೋಜನೆ ಮಾಡಲಾಗಿದೆ. ಫೋಟೋ, ವೀಡಿಯೊ ತೆಗೆದುಕೊಳ್ಳಲು ವಿವಿ ನಿರ್ಬಂಧ ಹೇರಿದೆ. ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿದ್ದಾರೆ ಎಂದು ತಿಳಿದುಬಂದಿದೆ.