ಕಲಬುರಗಿ | ಭ್ರಷ್ಟಾಚಾರ ಭಯೋತ್ಪಾದನೆಗಿಂತಲೂ ದೊಡ್ಡ ಅಪಾಯ : ಶ್ರೀನಿವಾಸ ನವಲೆ
ಕಲಬುರಗಿ : ದೇಶದಲ್ಲಿ ಭ್ರಷ್ಟಾಚಾರ ಆಳವಾಗಿ ಬೇರೂರಿದ್ದು, ಇದು ಭಯೋತ್ಪಾದನೆಗಿಂತಲೂ ದೊಡ್ಡ ಅಪಾಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ ನವಲೆ ಕಳವಳ ವ್ಯಕ್ತಡಿಸಿದರು.
ನಗರದ ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದಲ್ಲಿ ಮಂಗಳವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ಲೋಕಾಯುಕ್ತ, ಶರಣಬಸವೇಶ್ವರ ಕಲಾ ಮತ್ತು ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯಗಳ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ಲೋಕಾಯುಕ್ತ ಕಾಯ್ದೆ ಕುರಿತು ಕಾನೂನು ಅರಿವು ಕಾರ್ಯಕ್ರಮ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ-2025 ‘ಜಾಗೃತಿ ನಮ್ಮ ಒಟ್ಟು ಜವಾಬ್ದಾರಿ’ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭ್ರಷ್ಟಾಚಾರ ತಡೆಗಟ್ಟದೆ ಹೋದರೆ ಸಮಾಜದ ಪ್ರತಿ ವರ್ಗದ ನಾಗರಿಕರು ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಇದರಿಂದ ಜನಸಾಮಾನ್ಯರ ಜೀವನಕ್ಕೆ ಬಹಳ ತೊಂದರೆಯಾಗುತ್ತದೆ. ಯುವ ಪೀಳಿಗೆ ಇದರ ಕಡಿವಾಣಕ್ಕೆ ಸಿದ್ಧರಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕರ್ನಾಟಕ ಲೋಕಾಯುಕ್ತ ಪೋಲಿಸ್ ಅಧೀಕ್ಷಕ ಸಿ.ಸಿದ್ಧರಾಜು ಅವರು ಮಾತನಾಡಿ, ಭ್ರಷ್ಟಾಚಾರದಂತಹ ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡುವುದು ಮತ್ತು ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುವುದು ಎಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ. ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣವಾಗಬೇಕು, ಇದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಸುರೇಶಕುಮಾರ ನಂದಗಾಂವ ಸ್ವಾಗತಿಸಿದರು, ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ರಾಮಕೃಷ್ಣರೆಡ್ಡಿ ವಂದಿಸಿದರು, ಪ್ರಾಧ್ಯಾಪಕಿ ಅನಿತಾ ಭಕರೆ ನಿರೂಪಿಸಿದರು. ವೇದಿಕೆ ಮೇಲೆ ಆರಕ್ಷಕ ಅಧೀಕ್ಷ ಅರುಣಕುಮಾರ ಮತ್ತು ಪ್ರಾಧ್ಯಾಪಕ ಡಾ.ಓಂಪ್ರಕಾಶ ಶೀಲವಂತ ಇದ್ದರು. ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.