ಫೆಬ್ರವರಿಯಲ್ಲಿ ಕಲಬುರಗಿ ಜಿಲ್ಲಾ 22ನೇ ಕನ್ನಡ ಸಾಹಿತ್ಯ ಸಮ್ಮೇಳನ: ವಿಜಯಕುಮಾರ್ ತೇಗಲತಿಪ್ಪಿ
ಕಲಬುರಗಿ: ಇಂದಿನ ಯುವ ಜನರನ್ನು ಕನ್ನಡ ಸಾಹಿತ್ಯದತ್ತ ಆಕರ್ಷಿತರಾಗುವಂತೆ ಮಾಡಲು ಮತ್ತು ಹೊಸ ಸಾಹಿತ್ಯ ಬೆಳವಣಿಗೆಗೆ ಕಾರಣರಾಗಲು ಪ್ರೇರೇಪಿಸುವ ಉದ್ದೇಶದಿಂದ ಫೆಬ್ರವರಿ ತಿಂಗಳಲ್ಲಿ ಕಲಬುರಗಿ ಜಿಲ್ಲಾ 22ನೇ ಕನ್ನಡ ಸಾಹಿತ್ಯ ಸಮ್ಮೇಳನ ನಗರದಲ್ಲಿ ಏರ್ಪಡಿಸಲು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಿರ್ಧರಿಸಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ್ ತೇಗಲತಿಪ್ಪಿ ತಿಳಿಸಿದ್ದಾರೆ.
ಕಲಬುರಗಿ ನೆಲವು ಪ್ರತಿಭಾವಂತರ ನೆಲವಾಗಿದೆ. ಇದು ಕಲೆ, ಸಾಹಿತ್ಯ, ಸಂಗೀತ ಮತ್ತು ಸಂಸ್ಕೃತಿಯ ಕೇಂದ್ರವಾಗಿದ್ದು, ಶರಣರು, ಸೂಫಿ-ಸಂತರ ನಾಡಾಗಿದೆ. ಜೊತೆಗೆ ಸಾಮರಸ್ಯ ಮತ್ತು ಭಾವೈಕ್ಯತೆಯ ನಾಡಾಗಿದೆ ಎಂದು ಅವರು ವಿವರಿಸಿದರು.
ನಗರಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಎಂ.ಖರ್ಗೆ ಅವರನ್ನು ಕಸಾಪ ನಿಯೋಗ ಭೇಟಿ ಮಾಡಿ ಸಮ್ಮೇಳನದ ಬಗ್ಗೆ ಚರ್ಚಿಸಿತು. ಸಚಿವರ ನೇತೃತ್ವದಲ್ಲಿ ಕಲಬುರಗಿ ನಗರದಲ್ಲಿಯೇ ಫೆಬ್ರವರಿ ಮೂರನೇ ವಾರದಲ್ಲಿ ನಡೆಸುವ ಪ್ರಸ್ತಾಪವನ್ನು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ ಅವರು ಮಾಡಿದರು. ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದ ಸಚಿವರು, ಸಮ್ಮೇಳನ ಸುಸುತ್ರವಾಗಿ ಹಾಗೂ ಅರ್ಥಪೂರ್ಣವಾಗಿ ನಡೆಸಲು ಸೂಚನೆ ನೀಡಿದರು.
ಇದಕ್ಕೆ ಸಂಬoಧಪಟ್ಟಂತೆ ಕಸಾಪ ಸಭೆಯಲ್ಲಿ ಸಮ್ಮೇಳನದ ರೂಪುರೇಷೆಗಳ ಕುರಿತು ಚರ್ಚೆ ನಡೆಸಲಾಯಿತು. ಮುಂದಿನ ವಾರದಲ್ಲಿ ಸಮ್ಮೇಳನದ ಸ್ವಾಗತ ಸಮಿತಿ ರಚನೆ ಹಾಗೂ ಸಮ್ಮೇಳನಾಧ್ಯಕ್ಷರ ಆಯ್ಕೆ ಮಾಡಲು ನಿರ್ಧಾರ ತೆಗೆದುಕೊಳ್ಳಲಾಯಿತು.
ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ್ ತೇಗಲತಿಪ್ಪಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಕಸಾಪ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಕೋಶಾಧ್ಯಕ್ಷ ಶರಣರಾಜ ಚಪ್ಪರಬಂದಿ, ಪ್ರಮುಖರಾದ ಶಕುಂತಲಾ ಪಾಟೀಲ್, ಜಯಶ್ರೀ ಜಮಾದಾರ, ಕಲ್ಯಾಣಕುಮಾರ್ ಶೀಲವಂತ, ವಿನೊದಕುಮಾರ್ ಜೆ.ಎಸ್., ಸೈಯ್ಯದ್ ನಜಿರುದ್ದಿನ್ ಮುತ್ತವಲ್ಲಿ, ಸಿದ್ಧಲಿಂಗ ಬಾಳಿ, ರವೀಂದ್ರಕುಮಾರ್ ಭಂಟನಳ್ಳಿ, ಡಾ. ರೆಹಮಾನ್ ಪಟೇಲ್, ಶಿವಾನಂದ ಪೂಜಾರಿ, ರಾಜೇಂದ್ರ ಮಾಡಬೂಳ, ದಿನೇಶ್ ಮದಕರಿ, ತಾಲೂಕಾಧ್ಯಕ್ಷರಾದ ಶಿವಲೀಲಾ ಕಲಗುರ್ಕಿ, ಎಸ್.ಕೆ. ಬಿರಾದಾರ, ನಾಗಪ್ಪ ಸಜ್ಜನ್, ಶರಣಬಸಪ್ಪ ಕೋಬಾಳ, ವೀರಭದ್ರಪ್ಪ ಗುರುಮಿಠಕಲ್, ಸಂತೋಷ ಕುಡಳ್ಳಿ, ಸುರೇಶ ದೇಶಪಾಂಡೆ, ಸುರೇಶ ಲೇಂಗಟಿ, ಹಣಮಂತ ಖಜೂರಿ, ಪ್ರಭಾವತಿ ಮೇತ್ರಿ, ಪ್ರಭುಲಿಂಗ ಮೂಲಗೆ, ರವಿಕುಮಾರ ಶಹಾಪೂರಕರ್ ಸೇರಿದಂತೆ ಹಲವರು ಭಾಗವಹಿಸಿದ್ದರು.