ಸಮಾಜಕ್ಕೆ ಮಠ ಮಂದಿರಗಳ ಕೊಡುಗೆ ಅಪಾರ: ಶಾಸಕ ಶರಣಗೌಡ ಕಂದಕೂರ್
ವಡಗೇರಾ: ತಾಲೂಕಿನ ಸಂಗಮದ ಸಂಗಮೇಶ್ವರ ದೇವಸ್ಥಾನವು ಅತ್ಯಂತ ಐತಿಹಾಸಿಕ ದೇವಸ್ಥಾನವಾಗಿದ್ದು, ಸರಕಾರ ಈ ಸ್ಥಳದ ಅಭಿವೃದ್ಧಿಗೆ ಮುಂದಾಗಬೇಕು ಎಂದು ಗುರುಮಿಟ್ಕಲ್ ಶಾಸಕ ಶರಣಗೌಡ ಕಂದುಕೂರ ಒತ್ತಾಯಿಸಿದರು.
ವಡಗೇರಾ ತಾಲೂಕಿನ ಸುಕ್ಷೇತ್ರ ಕೃಷ್ಣವೇಣಿ ಭೀಮಾ ಸಂಗಮದ ಸಂಗಮೇಶ್ವರ ಜಾತ್ರಾ ಮಹೋತ್ಸವದ ಧರ್ಮಸಭೆ ಹಾಗೂ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಐವರು ಸಾಧಕರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶರಣಗೌಡ ಕಂದುಕೂರ, ಸಮಾಜಕ್ಕೆ ಮಠ ಮಂದಿರಗಳ ಕೊಡುಗೆ ಅಪಾರ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ನೆಮ್ಮದಿ ವೃದ್ಧಿಯಾಗುತ್ತದೆ. ಮಠ ಮಂದಿರ ಬೆಳವಣಿಗೆಗೆ ಭಕ್ತರ ಸಹಕಾರ ಅತ್ಯಂತ ಮುಖ್ಯವಾಗಿದೆ. ಕರುಣೇಶ್ವರ ಶ್ರೀಗಳು ಸಂಗಮ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಇಲ್ಲಿ ಉತ್ತಮವಾದ ವಾತಾವರಣವನ್ನು ನಿರ್ಮಿಸಿದ್ದಾರೆ ಎಂದು ಹೇಳಿದರು.
ಮಹಿಳೆಯರನ್ನು ಪ್ರತಿಯೊಬ್ಬರು ಪೂಜ್ಯ ಭಾವನೆಯಿಂದ ಕಾಣಬೇಕು. ಮಹಿಳೆಯರಿಗೆ ನಮ್ಮ ದೇಶದಲ್ಲಿ ತುಂಬಾ ಗೌರವ ಇದೆ ಎಂದರು. ಸಿದ್ದಗಂಗಾ ಮಠದ ಶ್ರೀಗಳಿಗೂ ಮತ್ತು ಕರುಣೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳಿಗೂ ಅವಿನಾಭಾವ ಸಂಬಂಧವಿದೆ. ಸಂಗಮೇಶ್ವರ ದೇವಸ್ಥಾನದ ಅಭಿವೃದ್ಧಿಗೆ ನಾನು ಒಬ್ಬ ಸಾಮಾನ್ಯ ಭಕ್ತನಾಗಿ ಶ್ರಮಿಸುವುದರ ಜೊತೆಗೆ ದೇವಸ್ಥಾನದಲ್ಲಿ ಹಮ್ಮಿಕೊಳ್ಳುವ ಸಾಮಾಜಿಕ ಧಾರ್ಮಿಕ ಕಾರ್ಯಗಳಿಗೆ ಸದಾ ಕಾಲ ಬೆಂಬಲವಾಗಿ ಶ್ರೀ ಕರುಣೆಶ್ವರ ಮಹಾಸ್ವಾಮಿಗಳ ಜೊತೆಗೆ ಇರುವುದಾಗಿ ಹೇಳಿದರು.
ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷೆ ಮಹದೇವಿ ಬೇವಿನಾಳ ಮಠ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿವರಾಜ್ ಪಾಟೀಲ್ ಗುರ್ಜಾಲ್ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕೃಷ್ಣವೇಣಿ ಭೀಮಾ ಸಂಗಮದ ಪರಮ ಪೂಜ್ಯ ಶ್ರೀ ಕರುಣೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಂದನಕೆರಾದ ಪರಮಪೂಜ್ಯ ಬನದರಾಚೊಟ್ಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿಕೊಂಡಿದ್ದರು.
ಇದೆ ಸಮಯದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸಂಗಮ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಂತರ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಈ ಕಾರ್ಯಕ್ರಮದಲ್ಲಿ ವೇದಮೂರ್ತಿ ವೀರಭದ್ರಯ್ಯ ಸ್ವಾಮಿ ದೇವಸುಗೂರ, ಶಿವರುದ್ರಯ್ಯ ಶಾಸ್ತ್ರಿಗಳು, ಬಸಯ್ಯಸ್ವಾಮಿ ಶಿವಪುರ, ಶಿವಯ್ಯ ಸ್ವಾಮಿ ಸಾತಕೇಡ, ಸಿದ್ದ ಬಸಯ್ಯಸ್ವಾಮಿ ಶಿವಪೂರ, ವಿಶ್ವನಾಥ್ ರೆಡ್ಡಿ ಗೊಂದೆಡಗಿ, ಬಸವಂತರಾಯ ಗೌಡ ಸೈದಾಪುರ, ಮಲ್ಲನಗೌಡ ಕೌಳುರ, ಮಲ್ಲಿಕಾರ್ಜುನ್ ಸತ್ಯಂಪೇಟೆ, ಮಲ್ಲಣ್ಣ ಐಕೂರ, ಮಲ್ಲಿಕಾರ್ಜುನ್ ಕರಿಕಳ್ಳಿ, ಬಾಶುಮಿಯಾ ನಾಯ್ಕೊಡಿ, ಚಂದ್ರುಗೌಡ ಸೈದಾಪುರ, ಪಂಪನಗೌಡ ಸಿರವಾರ ಮತ್ತು ಸಂಗಮೇಶ್ವರ ದೇವಸ್ಥಾನ ಸಮಿತಿಯ ಸದಸ್ಯರು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಮಹಿಳೆಯರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.