ಕಲಬುರಗಿ | ಮಂಗಳೂರು ವಿವಿಗೆ ನಾರಾಯಣ ಗುರು ಹೆಸರಿಡುವಂತೆ ಡಾ.ಪ್ರಣವಾನಂದ ಸ್ವಾಮೀಜಿ ಒತ್ತಾಯ
ಕಲಬುರಗಿ : ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಗೆ ಸಂತರ ಮತ್ತು ಮಹಾನ್ ವ್ಯಕ್ತಿಗಳ ಹೆಸರು ನಾಮಕರಣ ಮಾಡಲು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾವನೆ ಮಂಡಿಸುವಂತೆ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿರುವುದರಿಂದ ಮಂಗಳೂರು ವಿಶ್ವವಿದ್ಯಾಲಯಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರು ಘೋಷಣೆ ಮಾಡಬೇಕು ಎಂದು ಬ್ರಹ್ಮ ಶ್ರೀ ನಾರಾಯಣ ಗುರು ಶಕ್ತಿ ಪೀಠದ ಡಾ.ಪ್ರಣವಾನಂದ ಸ್ವಾಮೀಜಿ ಒತ್ತಾಯಿಸಿದ್ದಾರೆ.
ಕಲಬುರಗಿಯ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ರವಿವಾರ ನಡೆದ ಕಲ್ಯಾಣ ಕರ್ನಾಟಕ ಭಾಗದ ಈಡಿಗ ಮುಖಂಡರ ಸಭೆಯಲ್ಲಿ ಡಾ.ಪ್ರಣವಾನಂದ ಶ್ರೀಗಳು ಕೈಗೊಳ್ಳುವ ಪಾದಯಾತ್ರೆಯ ಬೇಡಿಕೆ ಪತ್ರವನ್ನು ಬಿಡುಗಡೆ ಮಾಡಿ ಮಾತನಾಡಿದರು.
ಮುಖ್ಯಮಂತ್ರಿಗಳು ಸಾಮಾಜಿಕ ನ್ಯಾಯದ ಹರಿಕಾರರೆಂದು ಹೆಸರಾಗಿರುವ ವಿಶ್ವಗುರು ಬಸವಣ್ಣ, ಶೂದ್ರ ಸಿದ್ಧಾಂತದ ಹರಿಕಾರ ಕನಕದಾಸರು, ಹಿಂದುಳಿದ ಸಮುದಾಯಗಳಿಗೆ ಚೈತನ್ಯ ನೀಡಿದ, ರಾಜ್ಯದ ಅಭಿವೃದ್ಧಿಗೆ ಚಲನಶೀಲತೆ ತಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಡಿ. ದೇವರಾಜ ಅರಸು ಮುಂತಾದ ಮಹನೀಯರ ಹೆಸರನ್ನು ವಿವಿಧ ವಿಶ್ವವಿದ್ಯಾಲಯಗಳಿಗೆ ನಾಮಕರಣ ಮಾಡುವ ಮುಖ್ಯಮಂತ್ರಿಗಳ ಪ್ರಸ್ತಾಪಕ್ಕೆ ಗೌರವ ಪೂರ್ವಕವಾಗಿ ಸ್ವಾಗತ ಕೋರುತ್ತೇನೆ ಎಂದರು.
" ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು " ಎಂಬ ವಿಶ್ವ ಸಂದೇಶ ನೀಡಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರನ್ನು ಮಂಗಳೂರು ವಿಶ್ವವಿದ್ಯಾಲಯಕ್ಕೆ ನಾಮಕರಣ ಮಾಡಲು ಮುಖ್ಯ ಕಾರ್ಯದರ್ಶಿಗಳು ಮುಂದಿನ ಸಚಿವ ಸಂಪುಟ ಸಭೆಗೆ ಮಂಡಿಸುವ ಪ್ರಸ್ತಾಪದಲ್ಲಿ ಸೇರಿಸಿಕೊಳ್ಳಬೇಕು. ನಾರಾಯಣ ಗುರುಗಳು ಕರ್ನಾಟಕಕ್ಕೆ ಭೇಟಿ ನೀಡಿದ ಏಕೈಕ ಸ್ಥಳ ಮಂಗಳೂರು ಆಗಿದ್ದು, 1908 ರಿಂದ 1912 ರ ಮಧ್ಯೆ ಮೂರು ಸಲ ಮಂಗಳೂರಿಗೆ ಭೇಟಿ ನೀಡಿ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ ಪ್ರತಿಷ್ಠಾಪನೆ ಮಾಡಿದರು ಎಂದರು.
ಮುಂದಿನ ವರ್ಷ ಜನವರಿ 6ರಿಂದ ಚಿತ್ತಾಪುರ ತಾಲೂಕು ಕರದಾಳು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದಿಂದ 41 ದಿನಗಳ ವರೆಗೆ ಬೆಂಗಳೂರು ಫ್ರೀಡಂ ಪಾರ್ಕ್ ವರೆಗೆ ನಡೆಸುವ 700 ಕಿಲೋಮೀಟರ್ ಪಾದಯಾತ್ರೆಯ ಪೂರ್ವ ಸಿದ್ಧತಾ ಸಭೆಯಲ್ಲಿ ಈ ನಿರ್ಣಯ ಅಂಗೀಕರಿಸಲಾಗಿದೆ.
ಜನವರಿ 6 ರಿಂದ ಪ್ರತಿ ದಿನ 20 ಕಿ.ಮೀ ಪಾದಯಾತ್ರೆ ನಡೆಸಿ ಚಿತ್ತಾಪುರ, ವಾಡಿ, ಶಹಬಾದ್, ಜೇವರ್ಗಿ, ಶಹಾಪುರ, ದೇವದುರ್ಗ, ಸಿರವಾರ, ಮಾನವಿ, ಸಿಂಧನೂರು, ಕಾರಟಗಿ, ಗಂಗಾವತಿ, ಹೊಸಪೇಟೆ ಚಿತ್ರದುರ್ಗ ಮಾರ್ಗ ಮೂಲಕ ಪಾದಯಾತ್ರೆ ಕೈಗೊಳ್ಳಲಾಗುವುದು.
ಕಾರ್ಯಕ್ರಮದಲ್ಲಿ ಉಪೇಂದ್ರ ಗುತ್ತೇದಾರ್ ಅಧ್ಯಕ್ಷತೆ ವಹಿಸಿದ್ದರು. ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕಡೇಚೂರ್, ಶಕ್ತಿ ಪೀಠದ ಟ್ರಸ್ಟಿ ವೆಂಕಟೇಶ ಗುಂಡಾನೂರ, ರಾಜೇಶ್ ಡಿ ಗುತ್ತೇದಾರ್, ಸುರೇಶ್ ಗುತ್ತೇದಾರ್ ಕರದಾಳ್, ಶಂಕರ್ ಲೀಡರ್, ಅಂಬಯ್ಯ ಗುತ್ತದಾರ, ಇಬ್ರಾಹಿಂಪೂರ, ಸುರೇಶ್ ಗುತ್ತೇದಾರ್ ಮಟ್ಟೂರ್, ಶಿವರಾಜ್ ಗುತ್ತೇದಾರ್ ಜೇವರ್ಗಿ, ಮಲ್ಲಯ್ಯ ಗುತ್ತೇದಾರ್, ಬಸಯ್ಯ ಗುತ್ತೇದಾರ್ ತೆಲ್ಲೂರ, ರಾಮಕೃಷ್ಣ ಅಶೋಕ್ ಗುತ್ತೇದಾರ್ ರಾಯಚೂರ, ಮಹೇಶ್ ಗೌಡ, ಸದಾನಂದ ಪೆರ್ಲ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.