ಕಲಬುರಗಿ | ಮುಂಗಾರು ಬೆಳೆಗಳ ವಿಮೆ ನೋಂದಣಿ ಅವಧಿ ವಿಸ್ತರಿಸಿ: ರಮೇಶ್ ಪೂಜಾರಿ
Update: 2025-08-27 21:00 IST
ಕಲಬುರಗಿ : ಮುಂಗಾರು ಬೆಳೆಗಳ ವಿಮೆ ಮಾಡಿಸುವ ನೋಂದಣಿಯ ಅವಧಿಯನ್ನು ವಿಸ್ತರಣೆ ಮಾಡಬೇಕೆಂದು ಅಫಜಲಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಪೂಜಾರಿ ಸರಕಾರಕ್ಕೆ ಒತ್ತಾಯಿಸಿದ್ದಾರೆ.
ಮುಂಗಾರು ಹಂಗಾಮಿನ ಬೆಳೆಗಳಾದ ಹೆಸರು, ಉದ್ದು, ತೊಗರಿ ಎಳ್ಳು ಸೇರಿದಂತೆ ಪೈರುಗಳು ಭಾರೀ ಮಳೆಯಿಂದ ಹಾನಿಗೆ ಒಳಗಾಗುವ ಸಾಧ್ಯತೆ ಇದೆ. ಅಫಜಲಪುರ ತಾಲೂಕಿನಾದ್ಯಂತ ಸುರಿದ ಭೀಕರ ಮಳೆಯಿಂದ ಬೆಳೆಗಳು ಹಾನಿಯಾಗಿರುವುದಲ್ಲದೆ ಹಳ್ಳ, ನದಿ ದಡದಲ್ಲಿರುವ ಜಮೀನುಗಳಂತೂ ತಿಂಗಳುಗಟ್ಟಲೆ ಮಳೆ ನೀರಿನಲ್ಲಿ ನಿಂತಿವೆ. ಇದರಿಂದ ರೈತರು ಕಂಗಾಲಾಗಿದ್ದು ಸರಕಾರ ಮುಂಗಾರು ಹಂಗಾಮಿನ ಬೆಳೆ ನೊಂದಣಿ ಮಾಡಿಕೊಳ್ಳುವ ದಿನಾಂಕವನ್ನು ಮತ್ತಷ್ಟು ವಿಸ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.
ತಾಲೂಕಿನ ಅನೇಕ ರೈತರಿಗೆ ಇನ್ನೂ ವಿಮೆ ಹಣ ಕಟ್ಟಲು ಸಾಧ್ಯವಾಗಿಲ್ಲ. ವಿಮೆ ಹಣ ಕಟ್ಟುವ ದಿನಾಂಕವನ್ನು ವಿಸ್ತರಿಸಿ ರೈತರಿಗೆ ಸರಕಾರ ಅನುಕೂಲ ಮಾಡಿಕೊಡಬೇಕೆಂದು ರಮೇಶ್ ಪೂಜಾರಿ ಪತ್ರಿಕಾ ಪ್ರಕಟನೆ ಮೂಲಕ ಆಗ್ರಹಿಸಿದ್ದಾರೆ.