ಕಲಬುರಗಿ | ಹೆಸರು, ಉದ್ದು ಬೆಳೆದ ರೈತರಿಂದ ನೋಂದಣಿಗಾಗಿ ಪರದಾಟ : ಸಮಸ್ಯೆ ನಿವಾರಿಸಲು ಆಗ್ರಹ
ಕಲಬುರಗಿ: ಕಾಳಗಿ ತಾಲೂಕಿನಲ್ಲಿ ರೈತರು ಬೆಳೆದ ಬೆಳೆಗಳ ಬಗ್ಗೆ ಬೆಳೆ ಸಮೀಕ್ಷೆದಾರರು ತಪ್ಪಾಗಿ ಸಮೀಕ್ಷೆ ಮಾಡುವುದರಿಂದ ಹೆಸರು, ಉದ್ದು ನೋಂದಣಿ ಮಾಡಿಕೊಳ್ಳಲು ಪರದಾಡುವಂತಾಗಿದ್ದು, ಕೂಡಲೆ ಈ ಸಮಸ್ಯೆ ಬಗೆಹರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ರೈತ ಸೇನೆಯ ಕಾಳಗಿ ತಾಲೂಕು ಘಟಕ ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಆಗ್ರಹಿಸಿದೆ.
ಭೂಮಿ ವಿವರ ನೀಡುವ ಪಹಣಿಗೆ ಬೆಳೆ ವಿವರ ನಮೂದಿಸುವಲ್ಲಿ ಅಧಿಕಾರಿಗಳು ಪಿಆರ್‌ಗಳು ಮಾಡಿದ ಎಡವಟ್ಟಿನಿಂದ ಬೆಳೆಯ ಬೆಂಬಲ ಬೆಲೆಗೆ ಕತ್ತರಿ ಬೀಳುತ್ತಿದೆ. ಹೀಗಾಗಿ ಬೆಂಬಲ ಬೆಲೆಯಲ್ಲಿ ಹೆಸರು, ಉದ್ದು ಸೋಯಾ ಖರೀದಿ ಕೇಂದ್ರದವರಿಗೆ ಪಹಣಿ, ಬೆಳೆಗೆ ಹೊಂದಾಣಿಕೆ ಆಗದ ಕಾರಣಕ್ಕೆ ಬೆಳೆ ಹೆಸರು ಉದ್ದುಸೋಯಾ ಫಸಲು ತೆಗೆದುಕೊಳ್ಳಲು ನಿರಾಕರಿಸುತ್ತಿದ್ದಾರೆ. ಇದರಿಂದ ರೈತರ ಬೆಳೆಗೆ ಬೆಂಬಲ ಬೆಲೆ ಸಿಗದೆ ಕಡಿಮೆ ಬೆಲೆಗೆ ದಲ್ಲಾಳಿಗಳಿಗೆ ಮಾರಾಟ ಮಾಡುವ ಪರಿಸ್ಥಿತಿ ಎದುರಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಬೆಳೆದ ಹೆಸರು, ಉದ್ದು, ಸೊಯಾ ಮಾರುಕಟ್ಟೆಯಲ್ಲಿ ಕಡಿಮೆ ದರದಲ್ಲಿ ಇರುವುದರಿಂದ ರೈತರು ಬೆಂಬಲ ಬೆಲೆಗೆ ಹಾಕಲು ನೋಂದಣಿ ಮಾಡಿಸಲು ಬಂದಾಗ ಸಮಸ್ಯೆ ಆಗುತ್ತಿದೆ. ಈ ಸಮಸ್ಯೆ ಬಗೆಹರಿಸಬೇಕು. ಬೆಂಬಲ ಬೆಲೆಯಲ್ಲಿ ಬೆಳೆಗಳನ್ನು ನೋಂದಾವಣೆ ಮಾಡಲು ರೈತರಿಗೆ ಬಯೋಮೆಟ್ರಿಕ್ ಕಡ್ಡಾಯ ಆಗಿರುವುದರಿಂದ ಹಿರಿಯ ನಾಗರಿಕರ ಬಯೋಮೆಟ್ರಿಕ್ ಆಗುತ್ತಿಲ್ಲ. ಇವೆಲ್ಲ ಅಂಶಗಳನ್ನು ಪರಿಗಣಿಸಿ ಇದಕ್ಕೆ ಪರ್ಯಾಯ ಮಾರ್ಗ ಒದಗಿಸಬೇಕು ಎಂದು ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ರೈತಸಂಘದ ಮುಖಂಡ ವೀರಣ್ಣ ಗಾಂಗಣಿ, ಜಗನಾಥ್ ಸ್ವಾಮಿ, ಕಲ್ಲಪ್ಪ ಹಿರೇಗೌಡ, ಲೋಕೇಶ್ ಹೊಡೆದ ಸೇರಿದಂತೆ ಇತರರು ಇದ್ದರು.