ಕಲಬುರಗಿ | ಸರಕಾರಿ ಹುದ್ದೆಗಳ ನಕಲಿ ಆದೇಶ ಪ್ರತಿ ಸೃಷ್ಟಿಸಿ ವಂಚನೆ; ಇಬ್ಬರು ಆರೋಪಿಗಳ ಬಂಧನ
ಕಲಬುರಗಿ : ಜಿಲ್ಲಾಧಿಕಾರಿಗಳ ಕಚೇರಿಯ ಪರಿಚಾರಕ ಹುದ್ದೆಗಳ ನಕಲಿ ನೇಮಕಾತಿ ಆದೇಶ ಪ್ರತಿಗಳನ್ನು ಸೃಷ್ಟಿಸಿ, ಸಾರ್ವಜನಿಕರನ್ನು ವಂಚಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಕಲಬುರಗಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಕುರಿತು ಶನಿವಾರ ಜಿಲ್ಲಾ ಪೊಲೀಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಲು ಅಡೂರು, ಈ ಪ್ರಕರಣದಲ್ಲಿ ಕಲಬುರಗಿ ಜಿಲ್ಲೆಯ ಮೇಳಕುಂದಾ (ಬಿ) ಗ್ರಾಮದ ನಾಗೇಶ್ ಮತ್ತು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಗುರ್ಲ ಹೊಸೂರಿನ ರಾಮಪುರ ಪ್ರದೇಶದ ನಿವಾಸಿ ಅಭಿಷೇಕ್ ಎಂಬವವರನ್ನು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಆರೋಪಿ ನಾಗೇಶ್ 9 ಮಂದಿಗೆ ಪರಿಚಾರಕ ಹುದ್ದೆಯಿಂದ ತಹಸೀಲ್ದಾರ ಗ್ರೇಡ್-2 ವರೆಗೆ ಹುದ್ದೆಗಳನ್ನು ಕೊಡಿಸುವುದಾಗಿ ನಂಬಿಸಿ, ಅವರಿಂದ ಒಟ್ಟು 8.55 ಲಕ್ಷ ರೂ. ಪಡೆದುಕೊಂಡಿದ್ದಾನೆ. ತನಿಖೆಯಲ್ಲಿ ಈತನಿಂದ ಎರಡು ಮೊಬೈಲ್‌ಗಳು, ಎರಡು ಸಿಮ್ ಕಾರ್ಡ್‌ಗಳು, ದಾಖಲೆಗಳು, ಕಂದಾಯ ಇಲಾಖೆ, ಆದಾಯ ತೆರಿಗೆ ಇಲಾಖೆ, ರೈಲ್ವೆ ಇಲಾಖೆ, ಅಬಕಾರಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪಂಚಾಯತ್ ರಾಜ್, ವಾಣಿಜ್ಯ ತೆರಿಗೆ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಒಟ್ಟು 43 ನಕಲಿ ನೇಮಕಾತಿ ಆದೇಶ ಪ್ರತಿಗಳು ಮತ್ತು 25,000 ರೂ. ನಗದು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.
ನಕಲಿ ನೇಮಕಾತಿ ಆದೇಶ ಪ್ರತಿಗಳನ್ನು ಸೃಷ್ಟಿಸಲು ನಾಗೇಶನ ಸಹಚರ ಅಭಿಷೇಕ್ WPS Office ಮತ್ತು Stamp Maker App ಗಳನ್ನು ಬಳಸಿ, ಪ್ರತಿಯೊಂದು ನಕಲಿ ಆದೇಶ ಪತ್ರಕ್ಕಾಗಿ 5,000 ರೂ. ಪಡೆಯುತ್ತಿದ್ದ. ಇವರಿಬ್ಬರು ಸೇರಿ ಸುಮಾರು 90-100 ಜನರನ್ನು ಸಂಪರ್ಕಿಸಿ, ವಿವಿಧ ಇಲಾಖೆಗಳ ಹುದ್ದೆಗಳ ನಕಲಿ ಆದೇಶ ಪ್ರತಿಗಳನ್ನು ತಯಾರಿಸಿ ವಂಚನೆ ಮಾಡುತ್ತಿದ್ದರೆಂದು ಪತ್ತೆಯಾಗಿದೆ. ಅಭಿಷೇಕ್ ನಿಂದ 11 ನಕಲಿ ಆದೇಶ ಪ್ರತಿಗಳು, ಎರಡು ಮೊಬೈಲ್‌ಗಳು ಮತ್ತು 22,000 ರೂ. ನಗದು ಜಪ್ತಿ ಮಾಡಲಾಗಿದೆ ಎಂದು ವಿವರಿಸಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕರವರ ಮಾರ್ಗದರ್ಶನದಲ್ಲಿ, ಸಿಎನ್ ಠಾಣೆಯ ಡಿ.ಎಸ್.ಪಿ ಬಸವೇಶ್ವರ, ಪಿ.ಐ.ವನಂಜಕರ, ಮಹಿಳಾ ಪೊಲೀಸ್ ಠಾಣೆ ಪಿ.ಐ.ಜಗದೀಶ್ ಅವರ ನೇತೃತ್ವದಲ್ಲಿ ಎರಡು ತಂಡಗಳು ರಚಿಸಲಾಗಿತ್ತು. ಆರೋಪಿಗಳ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿ, ಅವರನ್ನು ಬಂಧಿಸುವಲ್ಲಿ ಕಲಬುರಗಿ ಪೊಲೀಸರು ಯಶಸ್ವಿಯಾಗಿದ್ದಾರೆ.