ಕಲಬುರಗಿ | ಕಾಳಗಿ ಪಟ್ಟಣ ಪಂಚಾಯತ್‌ಗೆ ಸಾರ್ವತ್ರಿಕ ಚುನಾವಣೆ; ಆಗಸ್ಟ್ 17ಕ್ಕೆ ಮತದಾನ
ಕಲಬುರಗಿ: ಜಿಲ್ಲೆಯ ಕಾಳಗಿ ಪಟ್ಟಣ ಪಂಚಾಯತಿಯ ಒಟ್ಟು 11 ವಾರ್ಡ್ ಗಳ ಕೌನ್ಸಿಲರ್ ಭರ್ತಿಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರು ಮಂಗಳವಾರ ಚುನಾವಣಾ ಅಧಿಸೂಚನೆ ಹೊರಡಿಸಿದ್ದಾರೆ.
ಚುನಾವಣಾ ಅಧಿಸೂಚನೆಯಂತೆ ನಾಮಪತ್ರ ಸಲ್ಲಿಸಲು ಆ.5 ಕೊನೆಯ ದಿನವಾಗಿದೆ. ಆಗಸ್ಟ್ 6 ರಂದು ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆಯಲಿದ್ದು, ಉಮೇದುವಾರಿಕೆ ಪಡೆಯಲು ಇಚ್ಚಿಸುವರು ಆಗಸ್ಟ್ 8 ರೊಳಗೆ ಪಡೆಯಬಹುದು. ಅವಶ್ಯಬಿದ್ದರೆ ಆಗಸ್ಟ್ 17 ರಂದು ಬೆಳಿಗ್ಗೆ 7 ರಿಂದ ಸಾಯಂಕಾಲ 5 ಗಂಟೆ ವರೆಗೆ ಮತದಾನ ನಡೆಯಲಿದೆ. ಅಗತ್ಯವಿದ್ದಲ್ಲಿ ಆ.18ಕ್ಕೆ ಮರು ಮತದಾನ ನಡೆಸಲಾಗುತ್ತದೆ. ಆ.20 ರಂದು ತಾಲೂಕು ಕೇಂದ್ರದಲ್ಲಿ ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ತಿಳಿಸಲಾಗಿದೆ.
ವಾರ್ಡ್ ವಾರು ಮೀಸಲಾತಿ ವಿವರ:
1-ಇಳಗೇರ್ ಗಲ್ಲಿ, 2-ಮಲ್ಲಿಕಾರ್ಜುನ ಗುಡಿ ಏರಿಯಾ, 5-ಬಡಿಗೇರ ಕಟ್ಟಿ ಏರಿಯಾ ವಾರ್ಡ್ ಸಾಮಾನ್ಯ ಕ್ಷೇತ್ರವಾಗಿದೆ. 3-ಬಸವೇಶ್ವರ ಗುಡಿ ಏರಿಯಾ, 6-ಬೇಗಾರ ಗಲ್ಲಿ ಹಾಗೂ 8-ಪೊಲೀಸ್ ಸ್ಟೇಷನ್ ವಾರ್ಡ್ (ಸಾಮಾನ್ಯ ಮಹಿಳೆ) ಗೆ ಮೀಸಲಿರಿಸಿದೆ. 7-ರಾಮನಗರ ಮತ್ತು 10-ನಾಮು ನಾಯ್ಕ ಮತ್ತು ಕಿಂಡಿ ತಾಂಡಾ ವಾರ್ಡ್ ಸ್ಥಾನವು ಪರಿಶಿಷ್ಟ ಜಾತಿ ವರ್ಗಕ್ಕೆ ಮೀಸಲಿದೆ. 9-ಲಚ್ಚು ನಾಯಕ್ ಮತ್ತು ಸುಬ್ಬು ನಾಯಕ್ ತಾಂಡಾ ಮತ್ತು 11-ಕರಿಕಲ್ಲ ಮತ್ತು ದೇವಿಕಲ್ಲ ತಾಂಡಾ ಸ್ಥಾನ ಪರಿಶಿಷ್ಟ ಜಾತಿ(ಮಹಿಳೆ)ಗೆ ಮೀಸಲಿರಿಸಿದೆ. 4-ಕುರುಬರ ಗಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಿಸಿದೆ.