ಸೆ.27 ರಂದು ನಡೆಯಬೇಕಿದ್ದ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಮತದಾನಕ್ಕೆ ಕಲಬುರಗಿ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ
ಬೀದರ್ : ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ (ಇಮಾಮಪೂರ) ಆಡಳಿತ ಮಂಡಳಿಯ ನಿರ್ದೇಶಕರ ಸಾಮಾನ್ಯ ಚುನಾವಣೆ–2025ಕ್ಕೆ ಕಲಬುರಗಿ ಉಚ್ಚ ನ್ಯಾಯಾಲಯವು ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ ಎಂದು ಕಾರ್ಖಾನೆ ಹಾಗೂ ಬೀದರ್ ಸಹಾಯಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಖಾನೆಯ ಚುನಾವಣೆಯನ್ನು ನಡೆಸಲು ಸೆ.10ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಈ ಅಧಿಸೂಚನೆಯನ್ನು ಪ್ರಶ್ನಿಸಿ ಕಲಬುರಗಿ ಉಚ್ಚ ನ್ಯಾಯಾಲಯ ಪೀಠದಲ್ಲಿ ರೀಟ್ ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯವು ಚುನಾವಣಾ ಅಧಿಸೂಚನೆಗೆ ತಡೆಯಾಜ್ಞೆ ನೀಡಿ, ಸೆ.27ರಂದು ನಿಗದಿಯಾಗಿದ್ದ ಮತದಾನ ಪ್ರಕ್ರಿಯೆಯನ್ನು ತಡೆಹಿಡಿಯುವಂತೆ ಆದೇಶಿಸಿದೆ.
ಈ ಕುರಿತು ಮಾಹಿತಿಯನ್ನು ಕಲಬುರಗಿ ಪೀಠದ ಸರ್ಕಾರಿ ವಕೀಲ ಮಲ್ಲಿಕಾರ್ಜುನ ಸಾಹುಕಾರ ಅವರು ಇ-ಮೇಲ್ ಮೂಲಕ ತಿಳಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅದರಂತೆ ನಾಳೆ (ಸೆ.27) ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ನಡೆಯಬೇಕಿದ್ದ ಮತದಾನ ನಡೆಯುವುದಿಲ್ಲ ಎಂದು ಸ್ಪರ್ಧಾರ್ಥಿಗಳು ಮತ್ತು ಕಾರ್ಖಾನೆಯ ಅರ್ಹ ಮತದಾರರಿಗೆ ಪ್ರಕಟಣೆ ಮೂಲಕ ತಿಳಿಸಲಾಗಿದೆ.