ಕಲಬುರಗಿ | ಪರಿಸರ ಸಂರಕ್ಷಣೆ ಮಾಡದಿದ್ದರೆ ಗಾಳಿ ಖರೀದಿಸಬೇಕಾಗುತ್ತದೆ : ಶಿವಕುಮಾರ ಹೀರೆಮಠ
ಕಲಬುರಗಿ : 'ಪರಿಸರವನ್ನು ನಾವು ಸಂರಕ್ಷಣೆ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ನಮಗೆ ಉಸಿರಾಟಕ್ಕೆ ಬೇಕಾದ ಗಾಳಿಯನ್ನು ಖರೀದಿಸುವ ಪರಿಸ್ಥಿತಿ ಎದುರಿಸಬೇಕಾಗುತ್ತದೆ' ಎಂದು ಆಳಂದ ತಾಲ್ಲೂಕಿನ ಪಡಸಾವಳಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಶಿವಕುಮಾರ ಹಿರೇಮಠ ಹೇಳಿದರು.
ಆಳಂದ ತಾಲ್ಲೂಕಿನ ಹಡಲಗಿಯ ಸರಕಾರಿ ಪ್ರೌಢಶಾಲೆಯಲ್ಲಿ ಸರ್ ಜಗದೀಶ್ ಚಂದ್ರ ಬೋಸ್ ಇಕೋ ಕ್ಲಬ್ ಅಡಿಯಲ್ಲಿ ಹಮ್ಮಿಕೊಂಡಿರುವ ವಿಶೇಷ ಉಪನ್ಯಾಸ ಹಾಗೂ ಪರಿಸರ ಪ್ರಬಂಧ ಮತ್ತು ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿ, ಮಾತನಾಡಿದರು.
"ಮನುಷ್ಯನ ಭವಿಷ್ಯ ಸುರಕ್ಷಿತವಾಗಿರಲು ಹಸಿರು ವಾತಾವರಣವನ್ನು ನಿರ್ಮಿಸಿ, ಸುಸ್ಥಿರ ಪರಿಸರವನ್ನು ರೂಪಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲೆಯ ಮುಖ್ಯ ಗುರು ನಾದ ಕೆಂಚಪ್ಪ ಮಾತನಾಡಿ, “ಶಾಲೆಯ ಇಕೋ ಕ್ಲಬ್ ಮೂಲಕ ವಿವಿಧ ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಪ್ರಬಂಧ ಮತ್ತು ಚಿತ್ರಕಲಾ ಸ್ಪರ್ಧೆ, ಜಾಥಾ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿ ಹಾಗೂ ಸಮಾಜದಲ್ಲಿ ಪರಿಸರ ಸಂರಕ್ಷಣೆಗಾಗಿ ಜಾಗೃತಿ ಮೂಡಿಸಲಾಗುತ್ತಿದೆ” ಎಂದು ಹೇಳಿದರು.
ಕಾರ್ಯಕ್ರಮವನ್ನು ಐಶ್ವರ್ಯ ಹೊಸಮನಿ ಮತ್ತು ಮಹಾನಂದ ಅವರು ಪ್ರಾರ್ಥನ ಗೀತೆಯೊಂದಿಗೆ ಆರಂಭಿಸಿದರು. ಶಿಕ್ಷಕರಾದ ಅರವಿಂದ ಖೈರಾಟ ಕಾರ್ಯಕ್ರಮ ನಿರೂಪಿಸಿದರು. ಸಂಗಣ್ಣ ನೀಲೂರು ಸ್ವಾಗತಿಸಿದರು ಮತ್ತು ರಾಘವೇಂದ್ರ ನವಲಗುಂದ ವಂದಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಮಹೇಶ ಕಾಳಾ, ಚಂದ್ರಶೇಖರ ಪಾಟೀಲ, ಸುಶೀಲಾಬಾಯಿ, ರಾಜಶೇಖರ ಬಡದಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.