ಕಲಬುರಗಿ | ಸಂವಿಧಾನದಿಂದಲೇ ಸಮಾನತೆಯ ಬದುಕು ಕಟ್ಟಿಕೊಳ್ಳಲು ಸಾಧ್ಯ : ಅಲ್ಲಮಪ್ರಭು ಪಾಟೀಲ್
ಕಲಬುರಗಿ : ಸ್ವಾತಂತ್ರ ಪೂರ್ವದಲ್ಲಿ ಮತಾಂಧತೆ, ಜಾತಿಯತೆ, ಮೂಢನಂಬಿಕೆ, ಅಸ್ಪೃಶ್ಯತೆ ದೇಶದಲ್ಲಿ ತಾಂಡವಾಡುತ್ತಿತ್ತು. ಇಂತಹ ಎಲ್ಲಾ ಕಷ್ಟಗಳನ್ನು ಅನುಭವಿಸಿದ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರಿಂದ ರಚಿಸಲ್ಪಟ್ಟ ಸಂವಿಧಾನ ಜಾರಿಯಾದ ಪರಿಣಾಮ ಇಂದು ದೇಶದಲ್ಲಿ ಜಾತಿ, ಧರ್ಮ, ವರ್ಣವಿಲ್ಲದೆ ಸರ್ವರು ಸಮಾನತೆಯ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ ಎಂದು ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ್ ಹೇಳಿದರು.
ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಆಯೋಜಿಸಿದ “ಸಂವಿಧಾನ ದಿನಾಚರಣೆ-2025” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಅಮೆರಿಕಾದಿಂದ ಬಂದ ಅಕ್ಕಿ ತಿನ್ನಬೇಕಿತ್ತು. ಸ್ವಾತಂತ್ರ‍್ಯ ಬಂದ ನಂತರ ದೇಶದ ಸಮಗ್ರ ಅಭಿವೃದ್ಧಿಗೆ ಮತ್ತು ಸರ್ವರ ಏಳಿಗೆಗೆ ಅಂಬೇಡ್ಕರ್ ಅವರು ಸಂವಿಧಾನ ಎಂಬ ಮಹಾಗ್ರಂಥ ನೀಡಿದ ಫಲವಾಗಿ ಇಂದು ವಿಶ್ವಕ್ಕೆ ಆಹಾರ ಧಾನ್ಯ ನೀಡುವ ಸಾಮರ್ಥ್ಯ ನಮಗಿದೆ. ಬರಿ ಇಷ್ಟೆ ಅಲ್ಲ ವಿಶ್ವಕ್ಕೆ ಡಾಕ್ಟರ್, ಇಂಜಿನೀಯರ್ ಗಳನ್ನು ನಾವು ಪೂರೈಸುತ್ತಿದೇವೆ. ಅಷ್ಟರ ಮಟ್ಟಿಗೆ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ಕಂಡಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಕಲಬುರಗಿಯಲ್ಲಿ ಪದವಿ ಕಾಲೇಜು ಇರಲಿಲ್ಲ. ಉನ್ನತ ಶಿಕ್ಷಣಕ್ಕೆ ಹೈದರಾಬಾದ್‌ಗೆ ಹೋಗಬೇಕಿತ್ತು. ಇಂದು ಇಲ್ಲಿಯೇ 4 ರಿಂದ 5 ವಿಶ್ವವಿದ್ಯಾಲಯಗಳಿವೆ. ಇಂತಹ ಕ್ರಾಂತಿಕಾರಿ ಬದಲಾವಣೆಯ ಹಿಂದೆ ಸಂವಿಧಾನ ಮತ್ತು ಅದರ ಮೂಲಾಶಯ ಅಡಗಿದೆ ಎಂಬುದನ್ನು ಯಾರು ಮರೆಯಬಾರದು ಎಂದರು.
ಈ ವೇಳೆ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮಶೇಖರ್ ಮಾತನಾಡಿ, ಸಂವಿಧಾನ ಜಾರಿಗೆ ಬಂದು 75 ವರ್ಷ ಗತಿಸಿದರೂ ಇನ್ನು ಕೆಲವರು ಅದು ಒಂದು ವರ್ಗಕ್ಕೆ ಸೀಮಿತ, ಅಂಬೇಡ್ಕರ್ ಅವರೊಬ್ಬರೆ ಬರೆಯಲಿಲ್ಲ ಎಂಬಿತ್ಯಾದಿಯಾಗಿ ಶ್ರೇಷ್ಠ ಗ್ರಂಥವನ್ನು ಅನುಮಾನ ಮತ್ತು ಕೀಳರಿಮೆ ಮನೋಭಾವದಿಂದ ನೋಡುತ್ತಿರುವುದು ನಿಜಕ್ಕೂ ಶೋಚನೀಯವಾಗಿದೆ. ಪ್ರತಿಯೊಬ್ಬರು ಸಂವಿಧಾನ ಓದಬೇಕು ಮತ್ತು ಅದರ ಮೂಲ ಆಶಯ ಅರಿಯಬೇಕು. ಸಂವಿಧಾನ ಮರೆತರೆ ಭಾರತಕ್ಕೆ ಭವಿಷ್ಯವಿಲ್ಲ ಎಂದು ಹೇಳಿದರು.
ಭಾರತದ ಸಂವಿಧಾನವನ್ನು ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯದ ನಂತರ ಎರಡು ರೂಪದಲ್ಲಿ ಗ್ರಹಿಸಿದಾಗ ಇದರ ಮಹತ್ವ ಮತ್ತು ಪ್ರಾಮುಖ್ಯತೆ ನಮ್ಮ ಅರಿವಿಗೆ ಬರುತ್ತೆ. ಸ್ವಾತಂತ್ರ್ಯ ಪೂರ್ವ ಶಿಕ್ಷಣ, ಉದ್ಯೋಗ ಉಳ್ಳವರ ಪಾಲಾಗಿತ್ತು. ಮಹಿಳೆಯರನ್ನು ಕೆಟ್ಟದಾಗಿ ಕಾಣಲಾಗುತ್ತಿತ್ತು. ಬಾಲ್ಯ ವಿವಾಹ, ಜಾತಿ ವ್ಯವಸ್ಥೆ ಪದ್ದತಿ ಜಾರಿಯಲ್ಲಿತ್ತು. ಸ್ವಾತಂತ್ರ್ಯದ ನಂತರ ಸರ್ವರು ಗೌರವಯುತವಾಗಿ ಬದುಕು ಸಾಗಿಸುವಂತಾಗಿದೆ. ಶಿಕ್ಷಣ, ಆಹಾರ ಹಕ್ಕಾಗಿ ಪರಿಗಣಿಸಲಾಗಿದೆ. ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಲಭಿಸಿದೆ. ಪ್ರತಿ ವ್ಯಕ್ತಿಗೆ ಒಂದು ವೋಟಿನ ರಾಜಕೀಯ ಮೌಲ್ಯ ಸಿಕ್ಕಿದೆ. ಇದು ಸಂವಿಧಾನದ ಫಲ ಎಂದರು.
ಇದಕ್ಕು ಮುನ್ನ ಕಲಬುರಗಿ ನಗರದ ಸರದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಸಂವಿಧಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಯಿತು. ಜಾಥಾವು ಜಗತ್ ವೃತ್ತ ಮಾರ್ಗವಾಗಿ ರಂಗಮಂದಿರದವರೆಗೆ ಬಂದು ಸಂಪನ್ನಗೊಂಡಿತ್ತು. ಇನ್ನು ಜಗತ್ ವೃತ್ತದಲ್ಲಿ ಸಂವಿಧಾನ ದಿನಾಚರಣೆ ಹಿನ್ನೆಲೆಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಮಹಾನಗರ ಪಾಲಿಕೆಯ ಮಹಾಪೌರರಾದ ವರ್ಷಾ ರಾಜೀವ ಜಾನೆ, ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಹೆಚ್ಚುವರಿ ಎಸ್.ಪಿ. ಮಹೇಶ ಮೇಘಣ್ಣನವರ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಡಮನಿ ಆದಿಯಾಗಿ ಗಣ್ಯರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಡಮನಿ, ಸಹಾಯಕ ನಿರ್ದೇಶಕ ವಿಜಯಕುಮಾರ ಫುಲಾರೆ, ಕರ್ನಾಟಕ ರಾಜ್ಯ ಎಸ್‌ಸಿ, ಎಸ್‌ಟಿ ಸರಕಾರಿ, ಅರೆ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಮಹೇಶ ಹುಬ್ಳಿ ಸೇರಿದಂತೆ ಇತರೆ ಅಧಿಕಾರಿಗಳು, ಗಣ್ಯರು, ಶಾಲಾ-ಕಾಲೇಜು ಹಾಗೂ ವಸತಿ ನಿಲಯದ ಮಕ್ಕಳು ಭಾಗವಹಿಸಿದ್ದರು.