ಕಲಬುರಗಿ | ವಾರ್ತಾ ಇಲಾಖೆಯ ಉಪನಿರ್ದೇಶಕರಾಗಿ ಜಡಿಯಪ್ಪ ಜಿ. ಅಧಿಕಾರ ಸ್ವೀಕಾರ
ಕಲಬುರಗಿ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜಡಿಯಪ್ಪ ಜಿ. ಅವರು ಸೋಮವಾರ ಕಲಬುರಗಿ ಉಪನಿರ್ದೇಶಕರ ಕಚೇರಿಯಲ್ಲಿ ಹಿರಿಯ ಸಹಾಯಕ ನಿರ್ದೇಶಕರ ಹುದ್ದೆ ಜೊತೆಗೆ ಉಪನಿರ್ದೇಶಕ ಹುದ್ದೆಯ ಅಧಿಕಾರ ವಹಿಸಿಕೊಂಡರು.
ಕಲಬುರಗಿ ಕಚೇರಿಯ ಉಪನಿರ್ದೇಶಕ ಹುದ್ದೆಯನ್ನು ಪ್ರಭಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿದ್ದೇಶ್ವರಪ್ಪ ಜಿ.ಬಿ. ಅವರು ಜಡಿಯಪ್ಪ ಜಿ. ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ನಂತರ ವಾರ್ತಾ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪ್ರಭಾರದಿಂದ ಮುಕ್ತರಾದ ಸಿದ್ದೇಶ್ವರಪ್ಪ ಜಿ.ಬಿ. ಅವರಿಗೆ ಕಚೇರಿ ಸಿಬ್ಬಂದಿಗಳು ಮೈಸೂರು ಪೇಟಾ, ಶಾಲು, ಫಲ ತಾಂಬೂಲ ಹಾಗೂ ಸ್ಮರಣಿಕೆ ನೀಡಿ ಬೀಳ್ಕೊಟ್ಟರು. ಅದೇ ರೀತಿ ನೂತನ ಉಪನಿರ್ದೇಶಕರಿಗೆ ಸ್ವಾಗತ ಕೋರಲಾಯಿತು.
ನೂತನ ಉಪನಿರ್ದೇಶಕ ಜಡಿಯಪ್ಪ ಜಿ. ಅವರು ಮಾತನಾಡಿ, ಕೇಂದ್ರ ಕಚೇರಿ ಮತ್ತು ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಕಾರ್ಯನಿರ್ವಹಿಸಿರುವ ನನಗೆ ಸರಕಾರ ಇತ್ತೀಚೆಗೆ ಕಲಬುರಗಿ ಕಚೇರಿಗೆ ವರ್ಗ ಮಾಡಿದ್ದು, ಅದರಂತೆ ಇಂದು ಅಧಿಕಾರ ಸ್ವೀಕರಿಸಿರುವೆ. ಸಿದ್ದೇಶ್ವರಪ್ಪ ಜಿ.ಬಿ. ಅವರಿಗೆ ನೀಡಿದ ಸಹಕಾರ ತಮಗೂ ನೀಡುವಂತೆ ಮಾಧ್ಯಮ ಮಿತ್ರರಲ್ಲಿ ಮನವಿ ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಅನೇಕ ಪತ್ರಕರ್ತರು ನಿರ್ಗಮಿತ ಅಧಿಕಾರಿ ಸಿದ್ದೇಶ್ವರಪ್ಪ ಜಿ.ಬಿ. ಮತ್ತು ನೂತನ ಉಪನಿರ್ದೇಶಕರಾಗಿ ಅಧಿಕಾರ ವಹಿಸಿದ ಜಡಿಯಪ್ಪ ಜಿ. ಅವರಿಗೆ ವೈಯಕ್ತಿಕವಾಗಿ ಸನ್ಮಾನಿಸಿ ಅವರೊಂದಿಗಿನ ಸೇವಾ ಒಡನಾಟದ ಬಗ್ಗೆ ಮುಕ್ತ ಮನಸಿನ್ನಿಂದ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ, ರಾಜ್ಯ ಉಪಾಧ್ಯಕ್ಷ ಭವಾನಿ ಸಿಂಗ್, ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ, ಜಿಲ್ಲಾ ದಿನಪತ್ರಿಕೆಗಳ ಸಂಪಾದಕರ ಸಂಘದ ಅಧ್ಯಕ್ಷ ಸಿದ್ರಾಮಪ್ಪ ಬಿರಾದರ, ಹಿರಿಯ ಪತ್ರಕರ್ತರಾದ ಎಸ್.ಬಿ.ಜೋಷಿ, ವಾರ್ತಾ ಇಲಾಖೆ ಸಿಬ್ಬಂದಿಗಳಾದ ಉಮಾಶಂಕರ, ಸೈಯದ್ ಇಸ್ಮಾಯಿಲ್ ಪಾಶಾ, ದೇವಿಂದ್ರ, ಲಕ್ಷ್ಮೀಬಾಯಿ, ನರಸಿಂಹ, ಅಶೋಕ, ಅಪ್ರೆಂಟಿಸ್ ಅಭ್ಯರ್ಥಿ ರೂಪಾ ಸೇರಿದಂತೆ ಜಿಲ್ಲೆಯ ಅನೇಕ ಮುದ್ರಣ, ವಿದ್ಯುನ್ಮಾನ ಮಾಧ್ಯಮದ ಹಿರಿಯ ಮತ್ತು ಕಿರಿಯ ಪತ್ರಕರ್ತರು ಹಾಜರಿದ್ದರು. ಪತ್ರಕರ್ತ ಸಿದ್ದಣ್ಣ ಮಾಲಗಾರ ನಿರೂಪಿಸಿದರು. ವಾರ್ತಾ ಇಲಾಖೆಯ ರವಿ ಮಿರಸ್ಕರ್ ವಂದಿಸಿದರು.