ಕಲಬುರಗಿ | ಹೆಚ್ಚಿನ ಲಾಭದ ಆಮಿಷ: ಜೆಸ್ಕಾಂ ನಿವೃತ್ತ ನೌಕರನಿಗೆ 2.24 ಕೋಟಿ ರೂ. ವಂಚನೆ
ಕಲಬುರಗಿ : ಹೆಚ್ಚಿನ ಹಣ ಗಳಿಕೆಯ ಆಮಿಷವೊಡ್ಡಿ ಹೂಡಿಕೆಗೆ ಪ್ರಚೋದಿಸಿದ ಸೈಬರ್ ವಂಚಕರು, ಜೆಸ್ಕಾಂ ನಿವೃತ್ತ ನೌಕರರೊಬ್ಬರಿಂದ 2.24 ಕೋಟಿ ರೂ. ಮೊತ್ತವನ್ನು ವಂಚಿಸಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.
ನಗರದ ಅಕ್ಕಮಹಾದೇವಿ ಕಾಲೊನಿಯ ನಿವಾಸಿ ಹಾಗೂ ಜೆಸ್ಕಾಂ ನಿವೃತ್ತ ನೌಕರರಾದ 63 ವರ್ಷದ ದತ್ತಪ್ಪ ಸುರಪುರ ವಂಚನೆಗೆ ಒಳಗಾದವರು ಎಂದು ತಿಳಿದುಬಂದಿದೆ.
ದೂರುದಾರರ ಮಾಹಿತಿ ಪ್ರಕಾರ, ಕಳೆದ ವರ್ಷದ ಜೂನ್ 11ರಂದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ರೀಲ್ಸ್ ವೀಕ್ಷಿಸುವಾಗ ‘ಆಟೊ ಟ್ರೇಡಿಂಗ್’ ಸಂಬಂಧಿಸಿದ ಜಾಹೀರಾತು ಕಾಣಿಸಿಕೊಂಡಿತ್ತು. ಅದರಲ್ಲಿನ ಲಿಂಕ್ ಕ್ಲಿಕ್ ಮಾಡಿ ವೈಯಕ್ತಿಕ ಮಾಹಿತಿಯನ್ನು ನಮೂದಿಸಿದ ನಂತರ, ಅರುಣ ಜೋಶಿ ಎಂಬಾತ ಸಂಪರ್ಕಿಸಿ ‘ಕ್ವಾಂಟಾ ಪಲ್ಸ್’ ಎಂಬ ವೇದಿಕೆಯಲ್ಲಿ ಹೂಡಿಕೆ ಮಾಡಲು ಪ್ರೇರೇಪಿಸಿದ್ದಾನೆ.
ಆರಂಭದಲ್ಲಿ 12 ಸಾವಿರ ರೂ. ಹೂಡಿಕೆ ಮಾಡಿದಾಗ ದಿನನಿತ್ಯ ಆಟೊ ಟ್ರೇಡಿಂಗ್ ಲಾಭವಾಗಿ 500 ರೂ. ರಿಂದ 800 ರೂ. ವರೆಗೆ ಖಾತೆಗೆ ಜಮೆಯಾಗುತ್ತಿತ್ತು. ಇದರಿಂದ ನಂಬಿಕೆ ಮೂಡಿಸಿ ಹಂತ ಹಂತವಾಗಿ ಹೆಚ್ಚಿನ ಹಣ ಹೂಡಿಕೆ ಮಾಡಿಸಿಕೊಂಡು, ಕೊನೆಗೆ ಒಟ್ಟು 2.24 ಕೋಟಿ ರೂ. ಮೊತ್ತವನ್ನು ವಂಚಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.