×
Ad

ಕಲಬುರಗಿ | ರಸ್ತೆ ಸುರಕ್ಷತಾ ಜಾಗೃತಿ ಬೈಕ್ ರ‍್ಯಾಲಿಗೆ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ ಚಾಲನೆ

Update: 2026-01-27 20:06 IST

ಕಲಬುರಗಿ: ಪೊಲೀಸರು ಕೇವಲ ಕಾನೂನು ಜಾಗೃತಿ ಕಾರ್ಯಕ್ರಮಗಳಿಗೆ ಸೀಮಿತವಾಗದೆ, ಕಟ್ಟುನಿಟ್ಟಿನ ಅನುಷ್ಠಾನ ಮತ್ತು ವೈಯಕ್ತಿಕ ಜವಾಬ್ದಾರಿಯತ್ತ ದಿಟ್ಟ ಹೆಜ್ಜೆ ಇಡುವ ಅಗತ್ಯವಿದೆ ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಎಸ್.ಡಿ.ಶರಣಪ್ಪ ಅವರು ಹೇಳಿದರು.

ನಗರದ ಜಿಲ್ಲಾ ಪೊಲೀಸ್ ಮೈದಾನದಲ್ಲಿ ಮಂಗಳವಾರ ಕಲಬುರಗಿ ನಗರ ಪೊಲೀಸ್ ಹಾಗೂ ಯುನೈಟೆಡ್ ಆಸ್ಪತ್ರೆಯ ಸಹಯೋಗದಲ್ಲಿ ಆಯೋಜಿಸಿದ್ದ “ರಸ್ತೆ ಸುರಕ್ಷತಾ ಜಾಗೃತಿ ಬೈಕ್ ರ‍್ಯಾಲಿ”ಗೆ ಚಾಲನೆ ನೀಡಿ ಅವರು ಮಾತನಾಡಿದರು.

ಪೊಲೀಸ್ ಸಿಬ್ಬಂದಿಯೇ ಮೊದಲು ಟ್ರಾಫಿಕ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸಮಾಜಕ್ಕೆ ಮಾದರಿಯಾಗಬೇಕು. 2026ನೇ ವರ್ಷ ರಸ್ತೆ ಸುರಕ್ಷತೆಯ ಚಳವಳಿ ಹಾಗೂ ಕ್ರಿಯೆಯ ವರ್ಷವಾಗಬೇಕು ಎಂದು ಅವರು ಘೋಷಿಸಿದರು.

ಕಾನೂನು ಜಾರಿಗೆ ತರುವ ಜವಾಬ್ದಾರಿ ಮಾತ್ರವಲ್ಲ, ಕಾನೂನನ್ನು ಗೌರವಿಸಿ ಪಾಲಿಸುವ ಜವಾಬ್ದಾರಿಯೂ ನಮ್ಮ ಮೇಲಿದೆ. ಪ್ರತಿದಿನ ರಸ್ತೆ ಅಪಘಾತಗಳಲ್ಲಿ ಅಮೂಲ್ಯ ಜೀವಗಳು ಕಳೆದುಹೋಗುತ್ತಿದ್ದು, ಅವರ ಮೇಲೆ ಅವಲಂಬಿತ ಕುಟುಂಬಗಳು ಅನುಭವಿಸುವ ದುಃಖ ನಮ್ಮ ಕಣ್ಣೆದುರಿಗೇ ಇದೆ. ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದರೆ ನಮಗೂ ಅದೇ ಗತಿ ಬರಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಹೆಲ್ಮೆಟ್ ಧರಿಸಿದರೆ ಸಾವಿನ ಸಾಧ್ಯತೆ ಶೇ.70 ರಿಂದ 80ರಷ್ಟು ಕಡಿಮೆಯಾಗುತ್ತದೆ. ನೀವು ಹೆಲ್ಮೆಟ್ ಧರಿಸಿದರೆ ಇತರರೂ ಅನುಸರಿಸುತ್ತಾರೆ. ಇದು 2026ರಲ್ಲಿ ಜನಚಳವಳಿಯಾಗಬೇಕು. ರಸ್ತೆ ಸುರಕ್ಷತೆ ಒಂದು ವಾರದ ಕಾರ್ಯಕ್ರಮವಾಗದೆ, ಪ್ರತಿದಿನದ ಬದ್ಧತೆಯಾಗಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಉಪ ಪೊಲೀಸ್ ಆಯುಕ್ತ ಪ್ರವೀಣ ಎಚ್. ನಾಯಕ್, ಸಹಾಯಕ ಪೊಲೀಸ್ ಆಯುಕ್ತ ಶರಣಬಸಪ್ಪ ಸುಬೇದಾರ್, ಟ್ರಾಫಿಕ್ ವಿಭಾಗ-1 ಹಾಗೂ 2ರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಯುನೈಟೆಡ್ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದರು. ನರವೈದ್ಯ ಹಾಗೂ ಮೆದುಳು–ಮೂಳೆ ತಜ್ಞ ಡಾ. ವಿನಯಸಾಗರ್ ಶರ್ಮಾ, ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ಬಳಕೆಯಿಂದ ತಲೆ ಹಾಗೂ ಮೆದುಳು ಗಾಯಗಳನ್ನು ಹೇಗೆ ತಪ್ಪಿಸಬಹುದು ಎಂಬುದನ್ನು ವಿವರಿಸಿದರು. ಟ್ರಾಮಾ ಮತ್ತು ಲ್ಯಾಪ್ರೋಸ್ಕೋಪಿಕ್ ಶಸ್ತ್ರಚಿಕಿತ್ಸಕ ಡಾ. ಮೊಹಮ್ಮದ್ ಅಬ್ದುಲ್ ಬಸೀರ್, ಅಪಘಾತದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಮುನ್ನ ತೆಗೆದುಕೊಳ್ಳಬೇಕಾದ ಪ್ರಾಥಮಿಕ ಚಿಕಿತ್ಸೆ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಬೈಕ್ ರ‍್ಯಾಲಿ ಜಗತ್ ವೃತ್ತ, ತಿಮ್ಮಾಪುರ ವೃತ್ತ ಮಾರ್ಗವಾಗಿ ಸಂಚರಿಸಿ ಮತ್ತೆ ಪೊಲೀಸ್ ಮೈದಾನಕ್ಕೆ ತಲುಪಿತು. ಈ ರ್ಯಾಲಿ ರಸ್ತೆ ಸುರಕ್ಷತೆ ಹಾಗೂ ಕಠಿಣ ಶಿಸ್ತು ಪಾಲನೆಯ ಕುರಿತು ಸಾರ್ವಜನಿಕರ ಗಮನ ಸೆಳೆಯಿತು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News