ಕಲಬುರಗಿ | ವಾರದಲ್ಲಿ 5 ದಿನಗಳ ಕೆಲಸ ಜಾರಿಗೆ ಒತ್ತಾಯಿಸಿ ಮುಷ್ಕರ
ಕಲಬುರಗಿ : 12ನೇ ದ್ವಿಪಕ್ಷೀಯ ವೇತನ ಒಪ್ಪಂದದಂತೆ ಬ್ಯಾಂಕುಗಳಲ್ಲಿ ವಾರಕ್ಕೆ ಐದು ದಿನದ ಕೆಲಸ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿ, ಗ್ರಾಮೀಣ ಬ್ಯಾಂಕ್ ನೌಕರರ ಸಂಯುಕ್ತ ವೇದಿಕೆಯ ವತಿಯಿಂದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ಕಚೇರಿ, ಕುಸನೂರ ರಸ್ತೆ ಆವರಣದಲ್ಲಿ ಮಂಗಳವಾರ ಮುಷ್ಕರ ನಡೆಸಲಾಯಿತು.
ಮುಷ್ಕರವನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರೀಯ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ನೌಕರರ ಒಕ್ಕೂಟದ ಉಪಾಧ್ಯಕ್ಷ ಶಿವಕುಮಾರ್ ಬಗಲೂರ, 2024ರ ಮಾರ್ಚ್ 8ರಂದು ಐಬಿಎ (IBA) ಹಾಗೂ ಯುಎಫ್‌ಬಿಯು (UFBU) ನಡುವೆ 12ನೇ ದ್ವಿಪಕ್ಷೀಯ ವೇತನ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಅದರಂತೆ ವಾರಕ್ಕೆ ಐದು ದಿನದ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ತರಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿತ್ತು. ಆದರೆ ಒಂದೂವರೆ ವರ್ಷ ಕಳೆದರೂ ಕೇಂದ್ರ ಸರ್ಕಾರ ಅನಗತ್ಯ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿದರು.
ಈಗಾಗಲೇ ಆರ್‌ಬಿಐ, ನಾಬಾರ್ಡ್, ಎಲ್‌ಐಸಿ, ಜಿಐಸಿ, ಸೆಬಿ ಹಾಗೂ ಷೇರುಪೇಟೆಗಳಲ್ಲಿ ವಾರಕ್ಕೆ ಐದು ದಿನದ ಕೆಲಸ ವ್ಯವಸ್ಥೆ ಜಾರಿಯಲ್ಲಿದೆ. ಆದರೆ ಬ್ಯಾಂಕ್ ನೌಕರರಿಗೆ ಮಾತ್ರ ಮಲತಾಯಿ ಧೋರಣೆ ತೋರಲಾಗುತ್ತಿದೆ, ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಆದಷ್ಟು ಬೇಗ ಬ್ಯಾಂಕಿಂಗ್ ವಲಯಕ್ಕೂ ವಾರಕ್ಕೆ ಐದು ದಿನದ ಕೆಲಸ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎಸ್‌ಸಿ–ಎಸ್‌ಟಿ ವೆಲ್ಫೇರ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ರಾಹುಲ್ ಹರವಾಳ, ಖಜಾಂಚಿ ಕಿರಣ ಭಾವಿಮನಿ, ರಾಕೇಶ್, ಭೀಮಪ್ಪ, ಅಧಿಕಾರಿಗಳ ಸಂಘದ ಕಾರ್ಯಾಧ್ಯಕ್ಷ ಸಿದ್ದಣ್ಣ, ದತ್ತಾತ್ರೇಯ ಕುಲಕರ್ಣಿ, ಪ್ರಸನ್ನ ಕುಲಕರ್ಣಿ, ಶಿವಾನಂದ, ಅಭಿಷೇಕ, ಅರುಣಕುಮಾರ್, ಕಿರಣ ರೆಶ್ಮಿ, ಜ್ಯೋತಿ ವಾಲಿಶೆಟ್ಟಿ, ಹೇಮಾ ಸಕ್ರಿ, ಅಧಿಕಾರಿಗಳ ಜಿಲ್ಲಾ ಅಧ್ಯಕ್ಷ ಸಚಿನ್ ತೆಗ್ಗಿನ, ಕಾರ್ಯದರ್ಶಿ ಶ್ರೀನಿವಾಸ್, ನೌಕರರ ಸಂಘದ ಕಾರ್ಯಾಧ್ಯಕ್ಷ ವಿಶ್ವನಾಥ್ ರೆಡ್ಡಿ, ಜಿಲ್ಲಾಧ್ಯಕ್ಷ ಆನಂದ, ಹನುಮಾನ್ ಸಿಂಗ್, ಶಿವಲಿಂಗ ಸೇರಿದಂತೆ ಅನೇಕ ನೌಕರರು ಭಾಗವಹಿಸಿದ್ದರು.
ಇದಲ್ಲದೆ ನಿವೃತ್ತ ನೌಕರರಾದ ಎಸ್.ಎಸ್. ಕುಲಕರ್ಣಿ, ರಾಜೇಂದ್ರ ಮದಕುಂಟಿ, ರಾಜಶೇಖರ ಬಬಲಾದಕರ್ ಸೇರಿದಂತೆ ನೂರಾರು ಸಿಬ್ಬಂದಿಗಳು ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದರು.