ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ʼನಮ್ ಸಾಲಿʼ ಆಯ್ಕೆ : ರವಿ ಗೌರ
ಅಫಜಲಪುರದ ಯುವ ನಿರ್ದೇಶಕ ಅನೀಲ್ ರೇವೂರ್ ಸಾಧನೆಗೆ ಮೆಚ್ಚುಗೆ
ಅಫಜಲಪುರ : ಕನ್ನಡ ಚಿತ್ರರಂಗ ತನ್ನ ಐದು ದಶಕಗಳ ಸುವರ್ಣ ಸಂಭ್ರಮವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ, ಅಫಜಲಪುರ ಮೂಲದ ಯುವ ನಿರ್ದೇಶಕ ಅನೀಲ್ ರೇವೂರ್ ಅವರ “ನಮ್ ಸಾಲಿ” ಚಿತ್ರವು 17ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿರುವುದು ಕಲೆ, ಸಂಸ್ಕೃತಿ ಹಾಗೂ ಸೃಜನಶೀಲತೆಗೆ ದೊರೆತ ಮಹತ್ವದ ಗೌರವವಾಗಿದೆ ಎಂದು ಯುವ ಮುಖಂಡ ರವಿ ಗೌರ್ ಹೇಳಿದ್ದಾರೆ.
ಪಟ್ಟಣದಲ್ಲಿ ಮಾತನಾಡಿದ ಅವರು, ಜ.29ರಿಂದ ಫೆ.6ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವಿಶ್ವದ ಸುಮಾರು 70 ದೇಶಗಳ 225ಕ್ಕೂ ಅಧಿಕ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಇಂತಹ ಪ್ರತಿಷ್ಠಿತ ಹಾಗೂ ಸ್ಪರ್ಧಾತ್ಮಕ ವೇದಿಕೆಯಲ್ಲಿ ಕನ್ನಡದಿಂದ ಕೇವಲ 15 ಚಿತ್ರಗಳು ಮಾತ್ರ ಆಯ್ಕೆಯಾಗಿರುವುದು ವಿಶೇಷ ಎಂದರು.
ಪಿ. ಶೇಷಾದ್ರಿ, ರಿಷಭ್ ಶೆಟ್ಟಿ ಸೇರಿದಂತೆ ಖ್ಯಾತ ನಿರ್ದೇಶಕರ ಸಾಲಿನಲ್ಲಿ ಅಫಜಲಪುರದ ಯುವ ನಿರ್ದೇಶಕ ಅನೀಲ್ ರೇವೂರ್ ಅವರ ಚಿತ್ರ ಸ್ಥಾನ ಪಡೆದಿರುವುದು ಗ್ರಾಮೀಣ ಭಾಗಗಳಿಂದಲೂ ಅಂತರಾಷ್ಟ್ರೀಯ ಮಟ್ಟದ ಪ್ರತಿಭೆಗಳು ಹೊರಹೊಮ್ಮುತ್ತಿವೆ ಎಂಬುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
“ನಮ್ ಸಾಲಿ” ಚಿತ್ರವು ಗ್ರಾಮೀಣ ಬದುಕು, ಸರ್ಕಾರಿ ಶಾಲೆಗಳ ನೈಜ ಸ್ಥಿತಿ ಹಾಗೂ ಶಿಕ್ಷಣ ವ್ಯವಸ್ಥೆಯೊಳಗಿನ ಸವಾಲುಗಳನ್ನು ಸಂವೇದನಾಶೀಲವಾಗಿ ತೆರೆಮೇಲೆ ತರುತ್ತದೆ. ಸುಮಾರು 90 ನಿಮಿಷಗಳ ಅವಧಿಯ ಈ ಚಿತ್ರ ಕೇವಲ ಮನರಂಜನೆಯಷ್ಟೇ ಅಲ್ಲದೆ, ಸಮಾಜದಲ್ಲಿರುವ ಅಸಮಾನತೆ, ನಿರ್ಲಕ್ಷ್ಯ ಮತ್ತು ಅನುತ್ತರಿತ ಪ್ರಶ್ನೆಗಳತ್ತ ಪ್ರೇಕ್ಷಕರ ಗಮನ ಸೆಳೆಯುವ ಪ್ರಯತ್ನ ಮಾಡುತ್ತದೆ ಎಂದು ತಿಳಿಸಿದರು.
ಚಿತ್ರದಲ್ಲಿ ಅಫಜಲಪುರ ತಾಲೂಕಿನ ಶಿವಶರಣಪ್ಪ ಗೌರ ಅವರ ಪುತ್ರಿ ಗೌರಿ ಅಭಿನಯಿಸಿದ್ದು, ಗ್ರಾಮೀಣ ಹಿನ್ನೆಲೆಯ ಕಲಾವಿದರು ಹಾಗೂ ತಾಂತ್ರಿಕ ತಂಡದೊಂದಿಗೆ ನಿರ್ಮಾಣಗೊಂಡ ಈ ಚಿತ್ರಕ್ಕೆ ಅಂತರಾಷ್ಟ್ರೀಯ ಮಾನ್ಯತೆ ದೊರೆತಿರುವುದು ಇನ್ನಷ್ಟು ವಿಶೇಷವಾಗಿದೆ ಎಂದು ರವಿ ಗೌರ್ ಹೇಳಿದರು.
ಈ ಸಾಧನೆಗೆ ಸಾಹಿತಿ ಡಿ. ಎಂ. ನದಾಫ್, ಸುನಿಲ್ ಜಾಬಾದಿ, ಶ್ರೀಮಂತ ಬಿರಾದಾರ, ಬಿ. ಎಂ. ರಾವ್ ಸೇರಿದಂತೆ ಹಲವರು ಅಭಿನಂದನೆ ಸಲ್ಲಿಸಿ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಅನೀಲ್ ರೇವೂರ್ ಅವರ ಈ ಯಶಸ್ಸು ಅಫಜಲಪುರದ ಯುವ ಪ್ರತಿಭೆಗಳಿಗೆ ಹೊಸ ದಿಕ್ಕು ಹಾಗೂ ಪ್ರೇರಣೆಯಾಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.