ವಾಡಿ | 4 ಮಕ್ಕಳಿಗೆ ಹುಚ್ಚುನಾಯಿ ಕಡಿತ : ಲಾಡ್ಲಾಪುರ ಗ್ರಾಮದಲ್ಲಿ ಹೆಚ್ಚಿದ ಆತಂಕ
ಸಾಂದರ್ಭಿಕ ಚಿತ್ರ
ವಾಡಿ: ಲಾಡ್ಲಾಪುರ ಗ್ರಾಮದಲ್ಲಿ ಬೀದಿ ಹಾಗೂ ಹುಚ್ಚು ನಾಯಿಗಳ ಹಾವಳಿ ಹೆಚ್ಚಾಗಿದ್ದು, ಶಾಲಾ ಮಕ್ಕಳ ಮೇಲೆ ದಾಳಿ ನಡೆಸುತ್ತಿರುವ ಘಟನೆಗಳು ಪೋಷಕರಲ್ಲಿ ತೀವ್ರ ಆತಂಕ ಹುಟ್ಟಿಸಿವೆ.
ಸೋಮವಾರ ಸಂಜೆ ಶಾಲೆಯಿಂದ ಮನೆಗೆ ಮರಳುತ್ತಿದ್ದ ವೇಳೆ ಹುಚ್ಚು ನಾಯಿಗಳು ನಾಲ್ವರು ಶಾಲಾ ಬಾಲಕಿಯರ ಮೇಲೆ ಎರಗಿ ಕಚ್ಚಿ ಗಾಯಗೊಳಿಸಿರುವುದು ವರದಿಯಾಗಿದೆ. ಗ್ರಾಮದ ಬಸ್ ನಿಲ್ದಾಣ ಪ್ರದೇಶದಲ್ಲಿ ಹಿಂಡು ಹಿಂಡಾಗಿ ನಾಯಿಗಳು ತಿರುಗಾಡುತ್ತಿದ್ದು, ಅದರಲ್ಲಿ ಹುಚ್ಚು ನಾಯಿಗಳು ಸೇರಿಕೊಂಡಿರುವುದರಿಂದ ಅಪಾಯ ಹೆಚ್ಚಾಗಿದೆ.
ಸೋಮವಾರ ಸಂಜೆ ಲಾವಣ್ಯ, ದಿವ್ಯಾ ಹಾಗೂ ಅನಬಿಯ ಸೇರಿದಂತೆ ನಾಲ್ವರು ಬಾಲಕಿಯರ ಮೇಲೆ ಹುಚ್ಚು ನಾಯಿ ದಾಳಿ ನಡೆಸಿ ಕೈ, ತೋಳು, ಮುಖ ಹಾಗೂ ಬೆನ್ನಿಗೆ ಕಚ್ಚಿ ಗಂಭೀರ ಗಾಯಗೊಳಿಸಿದೆ. ಗಾಯಗೊಂಡ ಬಾಲಕಿಯರನ್ನು ಪೋಷಕರು ಅಲಹಳ್ಳಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಮನೆಗೆ ಕರೆದುಕೊಂಡು ಬಂದಿದ್ದಾರೆ.
ಕಳೆದ ತಿಂಗಳು ಸ್ಥಳೀಯ ಪ್ರಾಥಮಿಕ ಶಾಲೆಯ 5ನೇ ತರಗತಿ ಬಾಲಕಿಗೆ ನಾಯಿ ಕಚ್ಚಿದ್ದರಿಂದ ತಿಂಗಳುಗಟ್ಟಲೆ ಚಿಕಿತ್ಸೆ ಪಡೆಯಬೇಕಾಗಿ ಬಂದು ಶಾಲೆಗೆ ಹೋಗಲು ಸಾಧ್ಯವಾಗಿರಲಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಇತ್ತೀಚೆಗೆ ಬೇರೆ ಊರುಗಳಿಂದ ಬಂದಿರುವ ನಾಯಿಗಳು ಲಾಡ್ಲಾಪುರ ಗ್ರಾಮ ಪ್ರವೇಶಿಸಿದ್ದು, ಕೆಲವು ನಾಯಿಗಳಿಗೆ ಹುಚ್ಚು ರೋಗ ತಗುಲಿರುವ ಶಂಕೆ ವ್ಯಕ್ತವಾಗಿದೆ. ನಾಯಿಗಳು ಬೈಕ್ ಹಾಗೂ ಇತರ ವಾಹನಗಳನ್ನು ಬೆನ್ನಟ್ಟುತ್ತಿರುವುದರಿಂದ ಬೈಕ್ ಸವಾರರು ನೆಲಕ್ಕುರುಳಿದ ಘಟನೆಗಳೂ ನಡೆದಿವೆ.
ಗ್ರಾಮದಲ್ಲಿ ನಾಯಿಗಳ ನಿಯಂತ್ರಣಕ್ಕೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.