ಕಲಬುರಗಿ | ತೊಗರಿ ಬೆಳೆಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಆಗ್ರಹಿಸಿ ಮಾ.5ರಂದು ಬೃಹತ್ ಪ್ರತಿಭಟನೆ : ಅವ್ವಣ್ಣ ಮ್ಯಾಕೇರಿ
ಕಲಬುರಗಿ : ನೆಟೆ ರೋಗ, ತೇವಾಂಶ ಕೊರತೆಯಿಂದ ಹಾಳಾದ ತೊಗರಿ ಬೆಳೆಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಆಗ್ರಹಿಸಿ ನಗರದಲ್ಲಿ ಮಾ.5ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಎತ್ತಿನ ಬಂಡಿಗಳ ಜತೆಗೆ ಬುತ್ತಿ- ರೊಟ್ಟಿ ಕಟ್ಟಿಕೊಂಡು ಬಂದು ಉಣ್ಣುವ ಮೂಲಕ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಅವ್ವಣ್ಣ ಮ್ಯಾಕೇರಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, ಕಳೆದ ವರ್ಷ ನೆಟೆ ರೋಗದಿಂದ ತೊಗರಿ ಬೆಳೆ ನಷ್ಟವಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಆಗ ಸರ್ಕಾರ ಪರಿಹಾರ ನೀಡಿ ರೈತರ ನೆರವಿಗೆ ಧಾವಿಸಿತ್ತು. ಈ ವರ್ಷವೂ ತೊಗರಿ ಬೆಳೆಗೆ ಮತ್ತೆ ಸಂಕಷ್ಟ ಎದುರಾಗಿದ್ದು, ಬೆಳೆಗಾರರು ಆರ್ಥಿಕ ಹೊರೆಗೆ ಸಿಲುಕಿದ್ದಾರೆ. ಅವರ ಕಷ್ಟಗಳಿಗೆ ಸರಕಾರ ಪರಿಹಾರ ಕೊಡಬೇಕೆಂದು ಒತ್ತಾಯಿಸಿದರು.
ರೈತ ಮುಖಂಡ ದಯಾನಂದ ಪಾಟೀಲ್ ಮಾತನಾಡಿ, ನಗರದ ವೀರಶೈವ ಕಲ್ಯಾಣ ಮಂಟಪದ ಪಬ್ಲಿಕ್ ಗಾರ್ಡನ್‌ನಿಂದ ಜಿಲ್ಲಾಧಿಕಾರಿಗಳ ಕಚೇರಿಯವರಿಗೆ ಎತ್ತಿನ ಬಂಡಿಗಳ ಮೂಲಕ ತೆರಳಿ ಶಾಂತಿಯುತವಾದ ಪ್ರತಿಭಟನೆ ಮಾಡಲಾಗುವುದು. ಜಿಲ್ಲೆಯ ವಿವಿಧ ಗ್ರಾಮಗಳಿಂದ ರೈತರು, ಮಠಾಧೀಶರು, ಎಪಿಎಂಸಿ ವರ್ತಕರು, ವಿವಿಧ ಸಂಘ ಸಂಸ್ಥೆಗಳು, ಪ್ರಗತಿಪರ ಚಿಂತಕರು, ರೈತ ಮುಖಂಡರು ಮತ್ತು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಬಸವರಾಜ ಇಂಗಿನ, ಗಿರೀಶ ಪಾಟೀಲ್, ಮಲ್ಲಣ್ಣ ಕುಲಕರ್ಣಿ, ಚಂದ್ರಶೇಖರ ಹಿರೇಮಠ, ಚಂದ್ರಶೇಖರ ಹಿರೇಮಠ, ಎಮ್.ಡಿ.ಪಾಟೀಲ್ ಟಾಕಳಿ ಸೇರಿದಂತೆ ಇನ್ನಿತರರು ಇದ್ದರು.