×
Ad

ಕಲಬುರಗಿ | ಸುಳ್ಳು ಹೇಳುವ ಏಕೈಕ ಪ್ರಧಾನಿ ಮೋದಿ: ಮಾಜಿ ಸಂಸದ ಉಗ್ರಪ್ಪ ವಾಗ್ದಾಳಿ

"2022ರ ಮೀಸಲಾತಿ ಕಾನೂನು ಜಾರಿಗೊಳಿಸಿ"

Update: 2026-03-09 16:58 IST

ಕಲಬುರಗಿ: "ದೇಶದಲ್ಲಿ ಅನೇಕ ವಿಚಾರಗಳಲ್ಲಿ ಸುಳ್ಳು ಹೇಳುವ ಪ್ರಧಾನಿ ಯಾರಾದರೂ ಇದ್ದರೆ ಅದು ನರೇಂದ್ರ ಮೋದಿ ಮಾತ್ರ" ಎಂದು ಮಾಜಿ ಸಂಸದ ವಿ.ಎಸ್ ಉಗ್ರಪ್ಪ ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಿಸ್ಟರ್ ಮಹಾನುಭಾವ ಮೋದಿಯವರು ಇಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಬಂದು ಒಂದೊಂದು ಸಮುದಾಯಕ್ಕೆ ಎಸ್ಸಿ, ಎಸ್ಟಿ ಮಾಡ್ತೇವೆ ಎನ್ನುತ್ತಾರೆ, ಹೀಗೆ ಕೋಲಿ, ಕುರುಬ, ಗೊಲ್ಲ ಸಮಾಜಕ್ಕೆ ತುಪ್ಪ ಹಚ್ಚುತ್ತಾರೆ. ಮೋದಿಯವರ ಗೊಂದಲದ ಹೇಳಿಕೆಗಳಿಂದಾಗಿ ರಾಜ್ಯದಲ್ಲಿ ಇಂದು ಸಾಮಾಜಿಕ ನ್ಯಾಯಕ್ಕೆ ಹಿನ್ನಡೆಯಾಗಿದೆ ಎಂದು ಹೇಳಿದರು.

ಮಾಜಿ ಸಂಸದನಾಗಿ ಬದ್ಧತೆಯಿಂದ ಹೇಳುತ್ತೇನೆ. ದೇಶದಲ್ಲಿ ಅತ್ಯಂತ ದುರ್ಬಲ ಪ್ರಧಾನಿ ಯಾರಾದರೂ ಇದ್ದರೆ ಅದು ಮೋದಿ ಮಾತ್ರ. ಮೀಸಲಾತಿ ಯಾರಪ್ಪನ ಸೊತ್ತಲ್ಲ. ಯಾರ ಭೀಕ್ಷೆಯೂ ಅಲ್ಲ, ಸಂವಿಧಾನ ಕಲಂ 341 ಅಡಿಯಲ್ಲಿ ಯಾರು ಅಸ್ಪೃಶ್ಯರಿದ್ದರೆ ಅವರು ಎಸ್ಸಿ ಆಗಬೇಕು, 344 ರಲ್ಲಿ ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದರೆ ಬುಡಕಟ್ಟು ಜನಾಂಗದವರೂ ಆಗಿದ್ದಲ್ಲಿ ಅವರು ಎಸ್ಟಿ ಮೀಸಲಾತಿ ಪಡೆದುಕೊಳ್ಳಬೇಕು. 340 ಯಲ್ಲಿ ಸಾಮಾಜಿಕ ಶೈಕ್ಷಣಿಕವಾಗಿ ಹಿಂದುಳಿದವರು ಒಬಿಸಿಯಲ್ಲಿ ಮೀಸಲಾತಿ ಪಡೆಯಬೇಕೆಂದು ಡಾ.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಬರೆದಿದ್ದಾರೆ ಎಂದರು.

ಮೋದಿಯವರು ತಮ್ಮಲ್ಲಿರುವ ಶೇ.56ರಷ್ಟು ಮೀಸಲಾತಿ ಒದಗಿಸುವ 2022ರ ಕಾನೂನಿನ ಫೈಲ್ ಅನ್ನು ಮೂವ್ ಮಾಡಿದ್ರೆ, ಎಸ್ಸಿಗಳಿಗೆ 7 ಪರ್ಸೆಂಟೇಜ್, ಎಸ್ಟಿಗಳಿಗೆ 15 ಹಾಗೂ ಒಬಿಸಿಗಳಿಗೆ 32 ಮೀಸಲಾತಿ ಸಿಕ್ಕಿರೋದು. ಸರ್ಕಾರ ಹೊರಡಿಸಿರುವ 56 ಸಾವಿರ ಖಾಲಿ ಹುದ್ದೆಗಳ ನೇಮಕಾತಿಯಲ್ಲಿ ಎಸ್ಟಿಗೆ 8 ಸಾವಿರದಷ್ಟು ಹುದ್ದೆಗಳು ಸಿಗುತ್ತಿದ್ದವು ಎಂದರು.

2022 ರಲ್ಲಿ ಆಗಿನ ಬಿಜೆಪಿ ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ರೂಪಿಸಿರುವ ಶೇ.56 ರಷ್ಟು ಮೀಸಲಾತಿಯ ಕಾನೂನು ಕೂಡಲೇ ಜಾರಿಗೊಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಶೇ.56ರಷ್ಟು ಮೀಸಲಾತಿ ಜಾರಿಗೊಳಿಸಲು ರಾಜ್ಯದ ಸಚಿವ, ಸಂಸದ, ಎಂಎಲ್ಎ, ಎಂಎಲ್ಸಿ ಗಳು ಸೇರಿಕೊಂಡು ಸರ್ವಪಕ್ಷ ನಿಯೋಗದೊಂದಿಗೆ ಕೇಂದ್ರ ಸರಕಾರಕ್ಕೆ ಮನವೊಲಿಸಬೇಕು, ಇಲ್ಲದಿದ್ದರೆ ಮುಂಬರುವ ಏಪ್ರಿಲ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಸೇರಿದಂತೆ ರಾಜ್ಯದ ವಿವಿಧೆಡೆ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಅರ್ಹತೆ ಇದ್ದವರು ಎಸ್ಸಿ, ಎಸ್ಟಿ ಆಗಲಿ, ಈ ಭಾಗದ ಕೋಲಿ - ಕಬ್ಬಲಿಗ, ತಳವಾರ, ಪರಿವಾರ ಸಮುದಾಯದವರು ನಮ್ಮ ಅಣ್ಣ ತಮ್ಮಂದಿರೇ ಆಗಿದ್ದಾರೆ. ಆದರೆ ಅವರು ಕಾನೂನು ವ್ಯಾಪ್ತಿಯಲ್ಲಿ ಜಾತಿ ಪ್ರಮಾಣ ಪತ್ರ ತೆಗೆದುಕೊಳ್ಳಲಿ, ನಕಲಿ ಮತ್ತು ಸುಳ್ಳು ಪ್ರಮಾಣ ಪತ್ರ ತೆಗೆದುಕೊಳ್ಳುವ ಮೂಲಕ ಸಂಕಟದಲ್ಲಿ ಸಿಲುಕಬೇಡಿ ಎಂದು ಎಚ್ಚರಿಸಿದ್ದಾರೆ.

ಮುಂದೆ ನಿಮ್ಮ ಸಮುದಾಯ ಎಸ್ಟಿಗೆ ಸೇರಿಸಿದರೆ ಮೀಸಲಾತಿ ಪ್ರಮಾಣ ಹೆಚ್ಚಳವಾಗಬಹುದು. ಹಾಗಾಗಿ ವಾಲ್ಮೀಕಿ ಸಮುದಾಯದ ಉಪಜಾತಿಗಳ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದುಕೊಳ್ಳಬಾರದು. ಒಂದು ವೇಳೆ ಇಂತಹ ಜಾತಿ ಪ್ರಮಾಣ ಪತ್ರ ಪಡೆದುಕೊಳ್ಳುತ್ತಿದ್ದಲ್ಲಿ ಅವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ನಂದಕುಮಾರ ಮಾಲಿಪಾಟೀಲ್, ರಘುವೀರ್ ನಾಯಕ, ನರಸಿಂಹಯ್ಯ, ಗುರುರಾಜ್, ಮರೆಪ್ಪ ನಾಯಕ, ಶರಣು ಸುಬೇದಾರ್, ಶ್ರವಣಕುಮಾರ ಸೇರಿದಂತೆ ಹಲವರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News