×
Ad

ಕಲಬುರಗಿ | ಬಹುಮುಖ ಪ್ರತಿಭೆಯ ಚಿತ್ರಕಲಾವಿದರಿಗೆ ಅವಕಾಶಗಳು ಮುಖ್ಯ: ಡಾ.ಜೆ.ಎಸ್.ಖಂಡೇರಾವ್

Update: 2025-02-07 20:00 IST

ಕಲಬುರಗಿ : ಜಿಲ್ಲೆಯಲ್ಲಿರುವ ಬಹುಮುಖ ಪ್ರತಿಭೆಯ ಚಿತ್ರಕಲಾವಿದರಿಗೆ ಅವಕಾಶಗಳು ಮುಖ್ಯವಾಗಿವೆ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ನಾಡೋಜ ಡಾ. ಜೆ.ಎಸ್. ಖಂಡೇರಾವ್ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಫೆ.8ರಂದು ನಗರದ ಕನ್ನಡ ಭವನದಲ್ಲಿ ಏರ್ಪಡಿಸಿರುವ ದೃಶ್ಯಕಲಾ ಸಾಹಿತ್ಯ ಸಮ್ಮೇಳನದಂಗವಾಗಿ ನಗರದ ಕಲಾ ಸೌಧದಲ್ಲಿ ಶುಕ್ರವಾರ ನಡೆಸಿದ ಎರಡು ದಿನಗಳ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜೀವನದ ಸತ್ಯ ಸಂಗತಿಗಳನ್ನು ಅನಾವರಣಗೊಳಿಸುವ ಚಿತ್ರಕಲೆ ನಮ್ಮ ಅಭಿವ್ಯಕ್ತ ಮಾಧ್ಯಮವಾಗಿದೆ. ಭಾವನೆಗಳ ರೂಪದಲ್ಲಿ ಕಲೆಯನ್ನಾಗಿ ಸೃಷ್ಠಿಸುವ ಕಲೆಗಾರಿಕೆ ನಮ್ಮದ್ದಾಗಿದೆ ಎಂದು ಹೇಳಿದ ಅವರು, ಈ ನಿಟ್ಟಿನಲ್ಲಿ ಪರಿಷತ್ತು ಹೊಸ ಆಯಾಮಗಳನ್ನು ಪ್ರದರ್ಶಿಸಿ ಉತ್ತಮ ಕಾರ್ಯ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ನಮ್ಮ ಜೀವನದ ಸ್ಥಿತಿಗತಿಗಳನ್ನು ಪ್ರತಿಬಿಂಬಿಸುವ ಕಲೆಗಳು ಚಿತ್ರದ ಮೂಲಕ ಅಭಿವ್ಯಕ್ತಪಡಿಸುವ ಶಕ್ತಿ ಚಿತ್ರಕಲೆಗಿದೆ. ಇಂಥ ಸೃಷ್ಠಿಯ ಅನಾವರಣಕ್ಕೆ ಕಲಾ ಪ್ರತಿಭೆ ಹೊಂದಿದೆ. ಹೀಗಾಗಿ ಕಲಾವಿದರಿಗೆ ಮುಕ್ತ ಅವಕಾಶ ಬೇಕಾಗಿದೆ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಕಲಾವಿದರಿಗಾಗಿಯೇ ಪ್ರತ್ಯೇಕ ಕಲ ಸೌಧ ನಿರ್ಮಿಸಲಾಗಿದೆ. ಇದರ ಸದುಪಯೋಗ ಪಡೆದುಕೊಂಡು ಉದಯೋನ್ಮುಖ ಕಲಾವಿದರು ಮುಂದೆ ಬರಬೇಕು ಎಂದು ಹೇಳಿದರು.

ಗುಲ್ಬಾರ್ಗ ವಿ.ವಿ. ದೃಶ್ಯಕಲಾ ವಿಭಾಗದ ಸಂಯೋಜಕ ಡಾ.ಅಬ್ದುಲ್ ರಬ್ ಉಸ್ತಾದ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ-ಚಿತ್ರಕಲಾವಿದ ಡಾ.ನಾಗೇಂದ್ರ ಮಸೂತಿ, ವಿಶ್ವಖ್ಯಾತಿಯ ಚಿತ್ರಕಲಾವಿದ ಮಹ್ಮದ್ ಅಯಾಜೋದ್ದೀನ್ ಪಟೇಲ್, ಸಂಚಾಲಕ ಡಾ.ರೆಹಮಾನ್ ಪಟೇಲ್, ಜಿಲ್ಲಾ ಕಸಾಪದ ಶಿವರಾಜ ಅಂಡಗಿ, ಶರಣರಾಜ ಛಪ್ಪರಬಂದಿ, ರವೀಂದ್ರಕುಮಾರ ಭಂಟನಳ್ಳಿ, ರಾಜೇಂದ್ರ ಮಾಡಬೂಳ, ಗಣೇಶ ಚಿನ್ನಾಕಾರ, ಬಸವರಾಜ ಉಪ್ಪಿನ್, ರಾಜಶೇಖರ ಶಾಮಣ್ಣ ಇತರರು ಉಪಸ್ಥಿತರಿದ್ದರು.

ದೃಶ್ಯಕಲಾ ಸಾಹಿತ್ಯ ಸಮ್ಮೇಳನ :

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಇದೇ ಮೊದಲ ಬಾರಿಗೆ ಶನಿವಾರದಂದು ನಗರದ ಕನ್ನಡ ಭವನದಲ್ಲಿ ಆಯೋಜಿಸಿರುವ ಒಂದು ದಿನದ ದೃಶ್ಯಕಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಕರ್ನಾಟಕ ಲಲಿತಕಲಾ ವಿಶ್ವವಿದ್ಯಲಯದ ನಿವೃತ್ತ ವಿಶೇಷಾಧಿಕಾರಿ ಡಾ.ಎಸ್.ಸಿ.ಪಾಟೀಲ ಅವರ ಸಾರಥ್ಯದಲ್ಲಿ ಅರ್ಥಪೂರ್ಣ ಸಮ್ಮೇಳನ ನಡೆಸಲು ಸರ್ವ ಸಿದ್ಧತೆಗಳು ಪೂರ್ಣಗೊಂಡಿದೆ. ಬೆಳಗ್ಗೆ 9.30 ಕ್ಕೆ ನಗರದ ಜಿಲ್ಲಾಧಿಕಾರಿಗಳ ಕಛೇರಿಯಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಪ್ರಾರಂಭಗೊಳ್ಳಲಿದ್ದು, ಎಂ.ಎಚ್.ಬೆಳಮಗಿ ಚಾಲನೆ ನೀಡಲಿದ್ದಾರೆ.

ನುಡಿ ಸೇವಕ ಗುರುಬಸಪ್ಪ ಸಜ್ಜನಶೆಟ್ಟಿ ವೇದಿಕೆಯಡಿಯಲ್ಲಿ ನಡೆಯುವ ಸಮ್ಮೇಳನವನ್ನು ಹಿರಿಯ ಪತ್ರಕರ್ತ-ಸಾಹಿತಿ ಡಾ.ಶ್ರೀನಿವಾಸ ಸಿರನೂರಕರ್ ಉದ್ಘಾಟಿಸಲಿದ್ದು, ಡಾ.ಶಾಂತಲಾ ನಿಷ್ಠಿ, ಡಾ.ವಿ.ಜಿ.ಅಂದಾನಿ ಮುಕ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ನಂತರ ನಡೆಯುವ ಗೋಷ್ಠಿಯಲ್ಲಿ ಜಿಲ್ಲೆಯ ದೃಶ್ಯಕಲಾ ಪರಂಪರೆ ಕುರಿತು ಮಹಿಪಾಲರೆಡ್ಡಿ ಮುನ್ನೂರು, ದೃಶ್ಯಕಲೆ, ಶಿಕ್ಷಣ, ಸಾಹಿತ್ಯ ದ ಕುರಿತು ಡಾ.ಶಿವಾನಂದ ಭಂಟನೂರ, ಸಮ್ಮೇಳನಾಧ್ಯಕ್ಷರ ಬದುಕು-ಬರಹ ದ ಕುರಿತು ಡಾ.ಮೋಹನರಾವ ಪಂಚಾಳ ಮಾತನಾಡಲಿದ್ದಾರೆ.

ಹಿರಿಯ ಚಿತ್ರಕಲಾವಿದ ಡಾ.ಎ.ಎಸ್.ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಕಾವ್ಯ, ಕುಂಚ, ಗಾಯನ ಕಾರ್ಯಕ್ರಮ ನಡೆಯಲಿದ್ದು, ನಂತರ ನಡೆಯುವ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯ ಸದಸ್ಯ ರಾದ ಡಾ. ಬಸವರಾಜ ಕಲೇಗಾರ, ಡಾ.ಬಸವರಜ ಎಲ್ ಜಾನೆ,ವಿ.ಬಿ.ಬಿರಾದಾರ, ಬಸವರಜ ತೋಟದ, ಡಾ.ಎಸ್.ಎಂ.ನೀಲಾ ಸೇರಿದಂತೆ ಅನೇಕರು ಭಾಗವಹಿಸುವರು. ಕಲಾ ಕ್ಷೇತ್ರದ ದಿಗ್ಗಜ್ಜರನ್ನು ಸಹ ಇದೇ ಸಂದರ್ಭದಲ್ಲಿ ಸತ್ಕರಿಸಲಾಗುವುದು ಎಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News