ಕಲಬುರಗಿ | ರೈಲ್ವೆ ಡಿವಿಜನ್ ಸ್ಥಾಪಿಸುವಂತೆ ಆಗ್ರಹಿಸಿ, ಪ್ರತಿಭಟನಾಕಾರರಿಂದ 'ರೈಲು ರೋಕೋ ಚಳವಳಿ'
ಕಲಬುರಗಿ : ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗಾಗಿ ಪ್ರಮುಖ ಕೇಂದ್ರ ಸ್ಥಾನವಾಗಿರುವ ಕಲಬುರಗಿಯಲ್ಲಿ ರೈಲ್ವೆ ವಿಭಾಗವನ್ನು ಸ್ಥಾಪಿಸಬೇಕೆಂದು ಆಗ್ರಹಿಸಿ, ಕೆಕೆಸಿಸಿಐ ಸೇರಿದಂತೆ ಇತರೆ ಸಂಘಟನೆಗಳ ಮುಖಂಡರು ಸೇರಿಕೊಂಡು ಇಲ್ಲಿನ ರೈಲ್ವೆ ಸ್ಟೇಶನ್ ಗೆ ಮುತ್ತಿಗೆ ಹಾಕಿ, ರೈಲೊಂದನ್ನು ನಿಲ್ಲಿಸಲು ಯತ್ನಿಸಿರುವ ಘಟನೆ ಶುಕ್ರವಾರ ನಡೆದಿದೆ.
ಕಲಬುರಗಿ ರೈಲ್ವೆ ನಿಲ್ದಾಣಕ್ಕೆ ತೆರಳಿದ ಪ್ರತಿಭಟನಾಕಾರರು, ಪುಣೆ ಮತ್ತು ಸಿಕಂದರಾಬಾದ್ ಜಂಕ್ಷನ್ ನಡುವೆ ಕಲಬುರಗಿ ಮೂಲಕ ಚಲಿಸುವ ಶತಾಬ್ದಿ ಎಕ್ಸ್‌ಪ್ರೆಸ್ ರೈಲನ್ನು ತಡೆಯಲು ಯೋಜನೆ ರೂಪಿಸಿದ್ದರು. ಆದರೆ ನಿಲ್ದಾಣದಲ್ಲಿ ರೈಲ್ವೆ ಪೊಲೀಸ್, ಮತ್ತಿತರ ಪೊಲೀಸ್ ತುಕಡಿಗಳ ಭದ್ರತೆಯಿಂದ ಪ್ರತಿಭಟನಾಕಾರರಿಗೆ ಒಳಗೆ ಪ್ರವೇಶಿಸಲು ಬಿಡಲಿಲ್ಲ. ಈ ವೇಳೆ ಹಲವು ಮುಖಂಡರು ರೈಲ್ವೆ ಕಚೇರಿಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸುವುದರ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಪ್ರಾದೇಶಿಕ ಅಸಮಾನತೆ ಎದ್ದು ಕಂಡರೂ ಕಲಬುರಗಿಗೆ ಯಾವುದೇ ಪ್ರಾಶಸ್ತ್ಯ ನೀಡದಿರುವುದು ಬಹಳಷ್ಟು ನಿರಾಸೆ ಮೂಡಿಸುತ್ತಿದೆ, 371(ಜೆ) ರೀತಿಯಲ್ಲಿ ಕಲಬುರಗಿ ರೈಲ್ವೆ ವಿಭಾಗೀಯ ಹೋರಾಟ ಮಾಡುತ್ತಿದ್ದೇವೆ. ಈ ಭಾಗಕ್ಕೆ ಸವಲತ್ತು ಕೊಡೋದು ಸರಕಾರದ ಆದ್ಯ ಕರ್ತವ್ಯವಾಗಿದೆ, ಆದರೆ ಇಷ್ಟೊಂದು ನಿರ್ಲಕ್ಷ್ಯ ವಹಿಸುತ್ತಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ವೋಟ್ ಆಫ್ ಅಕೌಂಟ್ ಹಾಗೂ ಪಿಂಕ್ ಬುಕ್ ಅಲ್ಲಿ ದಾಖಲಾಗಿದೆ. ಟಿಕೆಟ್ ಪಡೆಯಲು ಪರದಾಟ ನಡೆಸಬೇಕು. ಕಲಬುರಗಿಯಿಂದ ರಾಜಧಾನಿ ಬೆಂಗಳೂರು ಹೋಗಲು ಕೇವಲ ಮೂರು ಟ್ರೈನ್ ಗಳು ಇವೆ. ನಮ್ಮ ಮಕ್ಕಳು ಬೆಂಗಳೂರಿಗೆ ಹೋಗಲು ತಿಂಗಳ ಮುಂಚೆ ಟಿಕೆಟ್ ಕಾಯ್ದಿರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾದರೆ ಮುಂದಿನ ದಿನಗಳಲ್ಲಿ ಪ್ರತ್ಯೇಕ ರಾಜ್ಯದ ಕೂಗು ಕೇಳಿ ಬರುವುದು ನಿಶ್ಚಿತ ಎಂದು ಹೋರಾಟಗಾರರು ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.
ಈ ಹೋರಾಟ ಕೇವಲ ಆರಂಭವಷ್ಟೇ, ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆಯ ಮೂಲಕ ಕಲಬುರಗಿಗೆ ಬೆಂಕಿ ಹತ್ತಬಹುದು. ಪ್ರತ್ಯೇಕ ರಾಜ್ಯದ ಧ್ವನಿ ಇದ್ದರೆ, ಆ ವೇಳೆಯಲ್ಲಿ ರೈಲ್ವೆ, ಡಿಸಿ ಕಚೇರಿ ಸುಡಲು ಹಿಂದೇ ಮುಂದೆ ನೋಡುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.
1984ರಲ್ಲಿ ನ್ಯಾ. ಎಚ್.ಸಿ.ಸರೀನ್ ಸಮಿತಿಯ ವರದಿ ಪ್ರಕಾರ ಕಲಬುರಗಿಯಲ್ಲಿ ರೈಲ್ವೆ ವಿಭಾಗ ಸ್ಥಾಪನೆಗೆ ಶಿಫಾರಸ್ಸು ಮಾಡಲಾಗಿದೆ. ಆದರೆ, ಕಳೆದ 40 ವರ್ಷಗಳಿಂದ ಈ ಕನಸು ನನಸಾಗದೇ ಉಳಿದಿದೆ. 2002ರಲ್ಲೂ ಸಹ ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಕಾಲದಲ್ಲಿ ಈ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಕೊನೆಯ ಗಳಿಗೆಯಲ್ಲಿ ಪ್ರಸ್ತಾವನೆಯನ್ನು ಕೈಬಿಡಲಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಈ ಸಂದರ್ಭದಲ್ಲಿ ಕೆಕೆಸಿಸಿಐ ಅಧ್ಯಕ್ಷ ಶಶಿಕಾಂತ ಪಾಟೀಲ್, ಲಿಂಗರಾಜಪ್ಪ ಅಪ್ಪಾ, ಅರುಣಕುಮಾರ ಪಾಟೀಲ್ ಕೊಡಲಹಂಗರಗಾ, ಉಮಾಕಾಂತ್ ನಿಗ್ಗುಡಗಿ, ಸುನಿಲ್ ಕುಲಕರ್ಣಿ, ಎಂ.ಎಸ್. ಪಾಟೀಲ್ ನರಿಬೋಳ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.