ಕಲಬುರಗಿ | ಪ್ರವಾಹದಿಂದ ಹಾನಿಯಾದ ರಸ್ತೆ ದುರಸ್ತಿಗೊಳಿಸಿ, ಬಸ್ ಸೌಕರ್ಯ ಕಲ್ಪಿಸಿ: ಭೀಮಾಶಂಕರ ಮಾಡ್ಯಾಳ ಒತ್ತಾಯ
ಕಲಬುರಗಿ: ಆಳಂದ ತಾಲ್ಲೂಕಿನಲ್ಲಿ ಭಾರೀ ಮಳೆ ಹಾಗೂ ಪ್ರವಾಹದಿಂದ ಹಾನಿಗೊಳಗಾದ ರಸ್ತೆಗಳನ್ನು ತುರ್ತಾಗಿ ದುರಸ್ತಿಗೊಳಿಸಿ, ರೈತರು ಮತ್ತು ಗ್ರಾಮಸ್ಥರಿಗೆ ಪರಿಹಾರ ಘೋಷಣೆ ಮಾಡಬೇಕು. ಹಾಗೆಯೇ ಸ್ಥಗಿತಗೊಂಡಿರುವ ಬಸ್ ಸಂಚಾರವನ್ನು ಕೂಡಲೇ ಪುನರಾರಂಭಿಸಬೇಕೆಂದು ಅಖಿಲ ಭಾರತ ಕಿಸಾನ್ ಸಭಾ (AIKS) ಜಿಲ್ಲಾಧ್ಯಕ್ಷ ಭೀಮಾಶಂಕರ ಮಾಡ್ಯಾಳ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಆಳಂದ ತಾಲ್ಲೂಕಿನ ನಿಂಬರ್ಗಾ, ಹಿತ್ತಲಶಿರೂರು, ಮಾಡ್ಯಾಳ, ಯಳಸಂಗಿ, ಹಡಲಗಿ, ನಿಂಬಾಳ, ದುಧನಿ, ಧಂಗಾಪುರ, ಬಟ್ಟರಗಾ, ಕುಡಕಿ ಸೇರಿದಂತೆ 25ಕ್ಕೂ ಹೆಚ್ಚು ಗ್ರಾಮಗಳಿಗೆ ಕಳೆದ ನಾಲ್ಕು ದಿನಗಳಿಂದ ಬಸ್ ಸೇವೆಗಳು ಸ್ಥಗಿತಗೊಂಡಿರುವುದನ್ನು ಖಂಡಿಸಿದರು.
ಶಾಲಾ-ಕಾಲೇಜು ವಿದ್ಯಾರ್ಥಿಗಳು, ತರಕಾರಿ ಹಾಗೂ ಧಾನ್ಯಗಳನ್ನು ಸಾಗಿಸುವ ರೈತರು, ತುರ್ತು ಚಿಕಿತ್ಸೆಗೆ ಅವಲಂಬಿಸಿರುವ ರೋಗಿಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಮಾಡ್ಯಾಳ ಗ್ರಾಮದಲ್ಲಿ ಕೆರೆ ಒಡೆದು ನೂರಾರು ಮನೆಗಳು ಮತ್ತು ಹೊಲಗಳನ್ನು ಮುಳುಗಿಸಿದ್ದು, ರೈತರಿಗೆ ಭಾರೀ ನಷ್ಟ ಉಂಟಾಗಿದೆ. ಸಂತ್ರಸ್ತ ಕುಟುಂಬಗಳಿಗೆ 20,000 ರೂ. ಪರಿಹಾರ ನೀಡಬೇಕು ಮತ್ತು ಕೆರೆಯ ತಕ್ಷಣದ ಪುನರ್ ನಿರ್ಮಾಣ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಸ್ತೆ ಮೂಲಸೌಕರ್ಯ ವಿಷಯವಾಗಿ ಅವರು ಆಕ್ರೋಶ ವ್ಯಕ್ತಪಡಿಸಿ, ಕಳೆದ ಎರಡು ವರ್ಷಗಳಿಂದ ನಿರ್ಮಾಣ ಕಾರ್ಯ ಪ್ರಾರಂಭವಾದ ಹಿತ್ತಲಶಿರೂರು–ನಿಂಬರ್ಗಾ ರಸ್ತೆ ಇನ್ನೂ ಅಪೂರ್ಣವಾಗಿದೆ. ಕೇವಲ ಜಲ್ಲಿಕಲ್ಲು ಹಾಕಿ ಕೆಲಸ ಅರ್ಧಕ್ಕೆ ನಿಲ್ಲಿಸಲಾಗಿದೆ ಎಂದು ಆರೋಪಿಸಿದರು.