ಕಲಬುರಗಿ | ಧಾವಜಿ ನಾಯಕ ತಾಂಡದಲ್ಲಿ ಮತಗಟ್ಟೆ ಸ್ಥಾಪನೆಗೆ ಮನವಿ
ಕಲಬುರಗಿ : ಕಾಳಗಿ ತಾಲೂಕಿನ ಮೋಘಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಧಾವಜಿ ನಾಯಕ ತಾಂಡದಲ್ಲಿ ಚುನಾವಣೆ ಸಮಯದಲ್ಲಿ ಮತದಾನ ಮಾಡಲು ನೂತನ ಮತಗಟ್ಟೆ ಸ್ಥಾಪಿಸುವಂತೆ ಧಾವಜಿ ನಾಯಕ ತಾಂಡದ ನಿವಾಸಿಗಳು ಗ್ರೇಡ್ -2 ತಹಶಿಲ್ದಾರ್ ರಾಜೇಶ್ವರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ತಾಂಡದ ಮುಖಂಡ ಪಿತಾಂಬರ್ ರಾಠೋಡ ಮಾತನಾಡಿ, ಮೋಘಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಧಾವಜಿ ನಾಯಕ ತಾಂಡವು ಮೋಘಾ ಗ್ರಾಮದಿಂದ ಸುಮಾರು ಐದು ಕಿ.ಮೀ ದೂರದಲ್ಲಿದೆ. ಆದರೆ ಸಂಚಾರಕ್ಕೆ ಯಾವುದೇ ರಸ್ತೆ ಇಲ್ಲ. ಕಾಲು ನಡಿಗೆ ರಸ್ತೆ ಮಾತ್ರ ಇದೆ ಇದರಿಂದ ಚುನಾವಣೆ ಬಂದಾಗಲೊಮ್ಮೆ ತಮ್ಮ ಹಕ್ಕನ್ನು ಚಲಾಯಿಸಲು ಧಾವಜಿ ನಾಯಕ ತಾಂಡದಿಂದ ನರನಾಳ, ರಾಣಾಪೂರ ಕ್ರಾಸ್, ಸಾಸರಗಾಂವ್ ಕ್ರಾಸ್, ಸಾಸರಗಾಂವ್, ರುಮ್ಮನಗೂಡ ಗ್ರಾಮದ ಮೂಲಕ ಸುಮಾರು 22ಕಿ.ಮೀ ಸಂಚರಿಸಿ ಮೋಘಾ ಗ್ರಾಮಕ್ಕೆ ಬಂದು ಮತ ಚಲಾಯಿಸಬೇಕಾಗಿದೆ ಎಂದರು.
ಇದರಿಂದ ಚುನಾವಣೆ ಬಂದಾಗಲೊಮ್ಮೆ ತಮ್ಮ ಹಕ್ಕನ್ನು ಚಲಾಯಿಸಲು ಮತದಾರರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಧಾವಜಿ ನಾಯಕ ತಾಂಡದಲ್ಲಿ ಸುಮಾರು 250ಕ್ಕೂ ಹೆಚ್ಚು ಮತದಾರರ ಸಂಖ್ಯೆ ಹೊಂದಿದ್ದು, ಜಿಲ್ಲಾಧಿಕಾರಿಗಳು ಹಾಗೂ ತಹಶಿಲ್ದಾರರು ತಾಂಡದ ಜನರ ಸಮಸ್ಯೆ ಧಾವಜಿ ನಾಯಕ ತಾಂಡದಲ್ಲಿಯೇ ಹೊಸ ಮತಗಟ್ಟೆ ಸ್ಥಾಪನೆ ಮಾಡುವ ಮೂಲಕ ಮತ ಚಲಾಯಿಸಲು ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮೋತಿರಾಮ ನಾಯಕ, ಸೀತಾರಾಮ ನಾಯಕ, ನೀಲಕಂಠ ಕಾರಬಾರಿ, ಕಾಶಿರಾವ ಡಾವ್, ಶೆಟ್ಟಿ ಗಂಗಾರಾಮ, ಲತ್ಕರ ಪೂಜಾರಿ, ತುಕಾರಾಮ ಶಿವರಾಯ, ಗೋಪಾಲ ಜಾಧವ್, ವೆಂಕಟ್ ರಾಠೋಡ, ಪೀತಾಂಬರ್ ರಾಠೋಡ, ಶಂಕರ ಢಾಕು, ಪ್ರಕಾಶ ಶೆಟ್ಟಿ, ಪ್ರೇಮಸಿಂಗ್ ಶಂಕರ್, ಗಣೇಶ ಕಿಶನ್, ಶೆಟ್ಟಿ ದೀಪ್ಲಾ, ಪ್ರೇಮಸಿಂಗ್ ಕಿಶನ್ ಸೇರಿದಂತೆ ಅನೇಕರು ಇದ್ದರು.