×
Ad

ಕಲಬುರಗಿ| ಈಶಾನ್ಯ ಶಿಕ್ಷಕರ ಮತದಾರರ ಪಟ್ಟಿ ಪರಿಷ್ಕರಣೆ : ಮತದಾರರ ನೋಂದಣಿ ಹೆಚ್ಚಾಗಬೇಕು: ಝಹೀರಾ ನಸೀಮ್

Update: 2025-10-17 21:58 IST

ಕಲಬುರಗಿ: ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿದ್ದು, ವಿಭಾಗದ ಕೇಂದ್ರ ಸ್ಥಾನವಾಗಿರುವ ಕಲಬುರಗಿ ಜಿಲ್ಲೆಯಲ್ಲಿ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಶಿಕ್ಷಕ ಮತದಾರರು ನೊಂದಣಿಯಾಗುವಂತೆ ಅಧಿಕಾರಿಗಳು ಹೆಚ್ಚು ಮುತುವರ್ಜಿ ವಹಿಸಬೇಕು ಎಂದು ಕ್ಷೇತ್ರದ ಮತದಾರರ ನೋಂದಣಾಧಿಕಾರಿಯಾಗಿರುವ ಪ್ರಾದೇಶಿಕ ಆಯುಕ್ತೆ ಝಹೀರಾ ನಸೀಮ್ ಸೂಚಿಸಿದರು.

ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಪ್ರಗತಿ ಪರಿಶೀಲನೆ ನಡೆಸಿದ ಅವರು, ಕಳೆದ ಬಾರಿ ಜಿಲ್ಲೆಯಲ್ಲಿ 41 ಮತದಾನ ಕೇಂದ್ರ ಸ್ಥಾಪಿಸಿದ್ದು, 9,529 ಮತದಾರರು ನೊಂದಣಿ ಮಾಡಿಕೊಂಡಿದ್ದರು. ಈ ಬಾರಿ ಮತದಾರರ ಸಂಖ್ಯೆ ಹೆಚ್ಚಾಗಬೇಕು ಎಂದರು.

ಕಲಬುರಗಿ ನಗರದಲ್ಲಿಯೇ ಶೇ.75ರಷ್ಟು ಜಿಲ್ಲೆಯ ಮತದಾರರಿರುವುದರಿಂದ ಮಹಾನಗರ ಪಾಲಿಕೆ ಆಯುಕ್ತರು ಮತ್ತು ಸಹಾಯಕ ಆಯುಕ್ತರು ಸ್ತಳೀಯರು ಹೆಚ್ಚು ನೋಂದಣಿಯಾಗುವಂತೆ ನೋಡಿಕೊಳ್ಳಬೇಕು. ದಿನದಿಂದ‌ ದಿನಕ್ಕೆ ಶಾಲಾ-ಕಾಲೇಜುಗಳ‌ ಸಂಖ್ಯೆ ಹೆಚ್ಚಿದರಿಂದ ಮತದಾರರ ಸಂಖ್ಯೆ ಸಹ ಹೆಚ್ಚಾಗಬೇಕಲ್ಲವೇ ಎಂದ ಅವರು, ವಿಶೇಷವಾಗಿ ಶಾಲಾ-ಕಾಲೇಜಿಗೆ ಹೋಗಿ ಅ.27 ಮತ್ತು 30 ಹಾಗೂ ನ.3ರಂದು ಮಿಂಚಿನ ನೋಂದಣಿ ಅಭಿಯಾನ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕೇವಲ ಪ್ರೌಢ ಶಾಲೆ, ಪಿ.ಯು. ಕಾಲೇಜು, ಪದವಿ ಕಾಲೇಜು ಕೇಂದ್ರಿಕರಿಸದೆ ಡಿ.ಪಿ.ಎ.ಆರ್ ಇಲಾಖೆ ಅಧಿಸೂಚಿಸಿರುವ 12 ವಿಭಾಗದಲ್ಲಿನ ವಿವಿಧ ಶಾಲೆ-ಕಾಲೇಜುಗಳನ್ನು ಸಂಪರ್ಕಿಸಿ ಶಿಕ್ಷಕರಿಂದ ಅರ್ಜಿ ಭರ್ತಿ ಮಾಡಿಸಿಕೊಳ್ಳಬೇಕು. ನರ್ಸಿಂಗ್ ಕಾಲೇಜು, ಇಂಜಿನಿಯರಿಂಗ್, ಮೆಡಿಕಲ್ ಕಾಲೇಜು ಸಹ ಹೆಚ್ಚಾಗಿರುವುದರಿಂದ ಈ ಕಡೆಯೂ ಸಹ ಗಮನ ಹರಿಸಬೇಕು ಎಂದ ಅವರು, ಇನ್ನು ಸ್ವೀಕೃತ ಅರ್ಜಿಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡಬೇಕಿರುವುದರಿಂದ ನೋಂದಣಿಗೆ ಕೊನೆ ದಿನವಾದ ನ.6ರ ವರೆಗೆ ಕಾಯದೆ ಕೂಡಲೆ ಕಾರ್ಯಪ್ರವೃತ್ತರಾಗಬೇಕು ಎಂದರು.

ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಮಾತನಾಡಿ, ಜಿಲ್ಲೆಯಾದ್ಯಂತ ಸರ್ಕಾರಿ , ಅನುದಾನಿತ ಹಾಗೂ ಅನುದಾನರಹಿತ 875 ಪ್ರೌಢ ಶಾಲೆ ಮತ್ತು 268 ಪದವಿ ಪೂರ್ವ ಕಾಲೇಜು ಹಾಗೂ ಸರ್ಕಾರಿ ಮತ್ತು ಅನುದಾನಿತ 32 ಪದವಿ ಕಾಲೇಜುಗಲಿದ್ದು, ಡಿ.ಡಿ.ಪಿ.ಐ, ಡಿ.ಡಿ.ಪಿ.ಯು ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ಈ ಸಂಸ್ಥೆಗಳಲ್ಲಿ ಮತದಾರರ ನೋಂದಣಿಗೆ ಹೆಚ್ಚಿನ ಜವಾಬ್ದಾರಿ ಹೂರಬೇಕು. ತಹಶೀಲ್ದಾರರು, ತಾಲೂಕು ಪಂಚಾಯತ್ ಇ.ಓ ಹಾಗೂ ಬಿ.ಇ.ಓ ಶಾಲಾ-ಕಾಲೇಜಿಗೆ ಭೇಟಿ ನೀಡಿ ನೋಂದಣಿ ಕಾರ್ಯ ಚುರುಕಾಗುವಂತೆ‌ ನೋಡಿಕೊಳ್ಳಬೇಕು. ನರ್ಸಿಂಗ್, ಮೆಡಿಕಲ್ ಕಾಲೇಜಿಗೆ ಪಿ.ಡಿ.ಓ ಗಳನ್ನು ನೋಡಲ್ ಅಧಿಕಾರಿಯನ್ನಾಗಿಸಿ ನೇಮಿಸಿ ನೋಂದಣಿಯಾಗುವಂತೆ ನೋಡಿಕೊಳ್ಳಬೇಕು ಎಂದರು.

ಸಭೆಯಲ್ಲಿ ಅಪರ‌ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಸಹಾಯಕ ಆಯುಕ್ತರಾದ ಸಾಹಿತ್ಯ, ಪ್ರಭುರೆಡ್ಡಿ, ಜಿಲ್ಲಾ‌ ಪಂಚಾಯತ್ ಉಪ ಕಾರ್ಯದರ್ಶಿ ಲಕ್ಣ್ಮಣ ಶೃಂಗೇರಿ, ಡಿ.ಡಿ.ಪಿ.ಯ ಸೂರ್ಯಕಾಂತ ಮದಾನೆ, ಡಿ.ಡಿ.ಪಿ.ಯು ಸುರೇಶ ಅಕ್ಕಣ್ಣ, ಕಾಲೇಜು ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಂದ್ರ ಶಿಂಧೆ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮುನಾವರ ದೌಲಾ ಸೇರಿದಂತೆ ತಾಲೂಕಿನ ತಹಶೀಲ್ದಾರರು, ತಾಲೂಕಾ ಪಂಚಾಯತ್ ಇ.ಓ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News