×
Ad

ಕಲಬುರಗಿ |ಎಸ್.ಸಿ.ಎಸ್.ಪಿ-ಟಿ.ಎಸ್.ಪಿ. ಪ್ರಗತಿ ಪರಿಶೀಲನೆ : ತಳ ಸಮುದಾಯದ ಅಭಿವೃದ್ಧಿಗೆ ಶೇ.100ರಷ್ಟು ಅನುದಾನದ ಖರ್ಚು ಅತ್ಯಗತ್ಯ : ರಾಯಪ್ಪ ಹುಣಸಗಿ

Update: 2025-10-13 23:13 IST

ಕಲಬುರಗಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ಕಲ್ಯಾಣಕ್ಕಾಗಿ ರಾಜ್ಯ ಸರಕಾರ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಯಡಿ ರಾಜ್ಯ ಮತ್ತು ಜಿಲ್ಲಾ ವಲಯದಡಿ ಬಿಡುಗಡೆ ಮಾಡಿದ ಅನುದಾನವನ್ನು ಶೇ.100ರಷ್ಟು ಖರ್ಚು ಮಾಡುವುದು ಅತ್ಯಗತ್ಯವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಹೇಳಿದರು.

ಸೋಮವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅನುಸೂಚಿತ ಜಾತಿ ಉಪ ಯೋಜನೆ ಮತ್ತು ಅನುಸೂಚಿತ ಪಂಗಡ ಉಪ ಯೋಜನೆ ಕಾರ್ಯಕ್ರಮಗಳ ಜಿಲ್ಲಾ ಮಟ್ಟದ ಎರಡನೇ ತ್ರೈಮಾಸಿಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಯಪ್ಪ ಹುಣಸಗಿ, ಆಯಾ ಇಲಾಖೆಗೆ ಬಿಡುಗಡೆಯಾದ ಅನುದಾನ ಕಾಲಮಿತಿಯಲ್ಲಿಯೇ ಖರ್ಚು ಮಾಡಿ ಆರ್ಥಿಕ ಮತ್ತು ಭೌತಿಕ ಪ್ರಗತಿ ಸಾಧಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಗಂಗಾ ಕಲ್ಯಾಣ ಯೋಜನೆ ಅನುಷ್ಠಾನಕ್ಕೆ ವಿವಿಧ ನಿಗಮಗಳಿಂದ ಫಲಾನುಭವಿಗಳ ಹೆಸರು ಅನುಮೋದನೆಗೊಂಡ ಪ್ರಕರಣಗಳಲ್ಲಿ ವಿಳಂಬ ಮಾಡದೆ ಜೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಸಿವಿಲ್ ಕಾಮಗಾರಿಗಳ ಪ್ರಕರಣಗಳಲ್ಲಿ ಕೂಡಲೆ ಟೆಂಡರ್ ಕರೆದು ಅಂತಿಮಗೊಳಿಸಿ ಕೆಲಸ ಆರಂಭಿಸಬೇಕು. ಶಿಕ್ಷಣ ಇಲಾಖೆಯಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸದಿರುವುದನ್ನು ಗಮನಿಸಿದ ಅವರು ಕೂಡಲೆ ಜಿಲ್ಲಾ ಪಂಚಾಯತಿಯಿಂದ ಅನುಮೋದನೆ ಪಡೆದು ಕಾಯೋನ್ಮುಖರಾಗಬೇಕೆಂದರು.

ಜಿಲ್ಲೆಯಾದ್ಯಂತ ನಗರ ಸ್ಥಳೀಐ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಪಿ.ಡಿ. ಡಿ.ಯು.ಡಿ.ಸಿ. ಅವರಿಗೆ ನಿರ್ದೇಶನ ನೀಡಿದ ಅಪರ ಜಿಲ್ಲಾಧಿಕಾರಿಗಳು, ವೈಯಕ್ತಿ ಸೌಲಭ್ಯ ಯೋಜನೆಗಳಡಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕೆಂದರು.

ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಡಮನಿ ಮಾತನಾಡಿ, ಇಲಾಖಾವಾರು ಪ್ರಗತಿ ಮಾಹಿತಿ ತಿಳಿಸಿದಲ್ಲದೆ ಪ್ರಸಕ್ತ 2025-26ನೇ ಸಾಲಿಗೆ ಇದುವರೆಗೆ ಎಸ್.ಸಿ.ಪಿ ಮತ್ತು ಟಿ.ಎಸ್.ಪಿ. ಯೋಜನೆಯಡಿ ಒಟ್ಟಾರೆ ಜಿಲ್ಲೆಗೆ 172.21 ಕೋಟಿ ರೂ. ಹಂಚಿಕೆಯಾಗಿ 115.40 ಕೋಟಿ ರೂ. ಬಿಡುಗಡೆಯಾಗಿದ್ದು, ಇದರಲ್ಲಿ 100.91 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಅಂಕಿ-ಸಂಖ್ಯೆಗಳೊಂದಿಗೆ ವಿವಿಧ ಇಲಾಖೆಯ ಪ್ರಗತಿ ಸಭೆ ಮುಂದಿಟ್ಟರು.

ಸಭೆಯಲ್ಲಿ ಜಿಲ್ಲಾ ಪಂಚಾಯ್ ಉಪ ಕಾರ್ಯದರ್ಶಿ ಲಕ್ಷ್ಮಣ ಶೃಂಗೇರಿ, ಸಿ.ಪಿ.ಓ ಎಸ್.ಎಸ್.ಮಠಪತಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮುನಾವರ ದೌಲಾ, ತೋಟಗಾರಿಕೆ ಉಪನಿರ್ದೇಶಕ ಸಂತೋಷ ಇನಾಂದಾರ ಸೇರಿದಂತೆ ವಿವಿಧ ಇಲಾಖೆ ಮತ್ತು ನಿಗಮಗಳ ಅಧಿಕಾರಿಗಳು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News