×
Ad

ಕಲಬುರಗಿ | ವಿಟಿಯು ವಿಶ್ವವಿದ್ಯಾಲಯದಲ್ಲಿ ಸೀಟು ಹಂಚಿಕೆ ಪ್ರಕ್ರಿಯೆ ಕಾರ್ಯಾಗಾರ

Update: 2025-06-28 21:34 IST

ಕಲಬುರಗಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವಿಟಿಯು ಸಿಪಿಜಿಎಸ್ ಮತ್ತು ಪ್ರಾದೇಶಿಕ ಕಚೇರಿ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಇವರ ಸಂಯುಕ್ತ ಆಶ್ರಯದಲ್ಲಿ "ಮಂಥನ-2025" ಎಂಬ ಶೀರ್ಷಿಕೆಯಲ್ಲಿ ಯುಜಿಸಿಇಟಿ -2025 ಸೀಟು ಹಂಚಿಕೆ ಪ್ರಕ್ರಿಯೆಯ ಕುರಿತ ಒಂದು ದಿನದ ಕಾರ್ಯಾಗಾರವನ್ನು 28 ಜೂನ್ 2025 ಶನಿವಾರದಂದು ವಿಟಿಯು ಆವರಣದ ಸೆಮಿನಾರ್ ಹಾಲ್ ನಲ್ಲಿ ಆಯೋಜಿಸಲಾಯಿತು.

ಕಾರ್ಯಾಗಾರದ ಮುಖ್ಯ ಉದ್ದೇಶವು ವಿದ್ಯಾರ್ಥಿಗಳು, ಪಾಲಕರು ಹಾಗೂ ಬೋಧಕ ಸಿಬ್ಬಂದಿಗೆ ಸೀಟು ಹಂಚಿಕೆ ಪ್ರಕ್ರಿಯೆ ಬಗ್ಗೆ ಸಂಪೂರ್ಣ ಅರಿವು, ಪಾರದರ್ಶಕತೆ ಹಾಗೂ ಸಿದ್ಧತೆಯನ್ನು ಒದಗಿಸುವುದು ಆಗಿತ್ತು. ಕಾರ್ಯಕ್ರಮದ ಮುಖ್ಯ ಪೋಷಕರಾಗಿ ವಿಟಿಯು ಬೆಳಗಾವಿಯ ಮಾನ್ಯ ಕುಲಪತಿಗಳಾದ ಪ್ರೊ.ವಿದ್ಯಾಶಂಕರ್ ಎಸ್. ಸೇವೆ ಸಲ್ಲಿಸಿದರು. ಇತರ ಪೋಷಕರಾಗಿ ಪ್ರೊ.ಬಿ.ಇ.ರಂಗಸ್ವಾಮಿ (ನೋಂದಣಾಧಿಕಾರಿ), ಡಾ.ಟಿ.ಎನ್.ಶ್ರೀನಿವಾಸ (ಮೌಲ್ಯಮಾಪನ ನೋಂದಣಾಧಿಕಾರಿ), ಮತ್ತು ಡಾ. ಪ್ಶಾಂತ ನಾಯಕ್ ಜಿ. (ಆರ್ಥಿಕ ಅಧಿಕಾರಿ) ಕಾರ್ಯಕ್ರಮವನ್ನು ಬೆಂಬಲಿಸಿದರು. ಕಾರ್ಯಾಗಾರವನ್ನು ಡಾ.ಶುಭಾಂಗಿ ಡಿ.ಸಿ., ಪ್ರಾದೇಶಿಕ ನಿರ್ದೇಶಕಿ (ಪ್ರಭಾರಿ), ವಿಟಿಯು ಕಲಬುರ್ಗಿ ಅವರು ಅಧ್ಯಕ್ಷತೆ ವಹಿಸಿ, ಡಾ.ಭಾರತಿ ಎಸ್., ವಿಟಿಯು ಕಲಬುರ್ಗಿಯ ನೋಡಲ್ ಅಧಿಕಾರಿಯಾಗಿ ಸಮರ್ಪಕವಾಗಿ ಸಂಯೋಜಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ( ಕೆಇಎ ) ಸಮನ್ವಯಾಧಿಕಾರಿ ಶ್ರೀ ಕಿರಣಕುಮಾರ ಅವರು ಭಾಗವಹಿಸಿ, ಯುಜಿಸಿಇಟಿ -2025 ಸೀಟು ಹಂಚಿಕೆ ಪ್ರಕ್ರಿಯೆ ಬಗ್ಗೆ ಮಹತ್ವದ ಮಾಹಿತಿಗಳನ್ನು ನೀಡಿದರು ಮತ್ತು ಭಾಗವಹಿಸಿದವರ ಪ್ರಶ್ನೆಗಳಿಗೆ ಉತ್ತರಿಸಿದರು. ಇದೇ ಸಂದರ್ಭದಲ್ಲಿ ಮಾನ್ಯ ಉನ್ನತ ಶಿಕ್ಷಣ ಸಚಿವರಾದ ಎಂ.ಸಿ.ಸುಧಾಕರ್ ಅವರ ವಿಡಿಯೋ ಸಂದೇಶ ಪ್ರದರ್ಶನಗೊಂಡಿತ್ತು, ಇದರಲ್ಲಿ ಅವರು ಭಾಗವಹಿಸಿದ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪಾಲಕರು, ಬೋಧಕ ಸಿಬ್ಬಂದಿ ಹಾಗೂ ವಿಶೇಷಾಧಿಕಾರಿಗಳು ಸಕ್ರಿಯವಾಗಿ ಭಾಗವಹಿಸಿದರು. ವಿವಿಧ ವಿಭಾಗಗಳ ಕಾರ್ಯಕ್ರಮ ಸಂಯೋಜಕರಾದ ಡಾ.ಎಂ.ಎ.ವಹೀದ್ (ಸಿ.ಎಸ್.ಇ. ಮತ್ತು ಇ.ಸಿ.ಇ.), ಡಾ.ಬ್ರಿಜ್ಭೂಷಣ್ (ಸಿವಿಲ್), ಅಂಬಾದಾಸ್ (ಮೆಕ್ಯಾನಿಕಲ್), ಮತ್ತು ಡಾ.ಸತೀಶ್ ಉಪಲೋಂಕರ್ (ಮ್ಯಾನೇಜ್ಮೆಂಟ್ ಸ್ಟಡೀಸ್) ರವರು ಕಾರ್ಯಾಗಾರದ ಸುಗಮ ನಿರ್ವಹಣೆಯಲ್ಲಿ ಪ್ರಮುಖ ಪಾತ್ರವಹಿಸಿದರು.

ಈ ಕಾರ್ಯಾಗಾರವು ವಿದ್ಯಾರ್ಥಿಗಳು ಮತ್ತು ಪಾಲಕರಲ್ಲಿ ಇರುವ ಸಂಶಯಗಳನ್ನು ನಿವಾರಣೆ ಮಾಡುವುದು ಹಾಗೂ ಸೀಟು ಹಂಚಿಕೆ ಸಂಬಂಧಿತ ನಿಖರ ಮಾಹಿತಿಯನ್ನು ಪಸರಿಸುವಲ್ಲಿ ಬಹುಮುಖ್ಯವಾದ ವೇದಿಕೆಯಾಗಿತು. ಕೆಇಎ ಮತ್ತು ವಿಟಿಯು ಸಂಯುಕ್ತ ಸಹಕಾರದಿಂದ ಈ ಕಾರ್ಯಾಗಾರವನ್ನು ಯಶಸ್ವಿಯಾಗಿ ನಡೆಸಲಾಯಿತು ಎಂದು ಎಲ್ಲರೂ ಮೆಚ್ಚಿದರು. ಸುಮಾರು 300 ವಿದ್ಯಾರ್ಥಿಗಳು ಮತ್ತು ಪಾಲಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News