ಕಲಬುರಗಿ: ಕೇಂದ್ರೀಯ ವಿವಿಯಲ್ಲಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪ
ಕಲಬುರಗಿ: ಇಲ್ಲಿನ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ ಕ್ಯಾಂಟೀನ್ ಮಾಲಕ ವಿದ್ಯಾರ್ಥಿನಿಯೋರ್ವಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ತಡವಾಗಿ ಬೆಳಕಿಗೆ ಬಂದಿದೆ.
ಆಳಂದ ತಾಲ್ಲೂಕಿನ ಕಡಗoಚಿ ಸಮೀಪದಲ್ಲಿರುವ ಈ ಕೇಂದ್ರೀಯ ವಿವಿಯಲ್ಲಿ ಇತ್ತೀಚೆಗಷ್ಟೇ ವಿದ್ಯಾರ್ಥಿನಿಯ ಆತ್ಮಹತ್ಯೆ ಪ್ರಕರಣ ನಡೆದ ಬೆನ್ನಲ್ಲೇ ಇದೀಗ ಮತ್ತೋರ್ವ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಮುನ್ನೆಲೆಗೆ ಬಂದಿದ್ದು, ಆಂಧ್ರಪ್ರದೇಶದ ಮೂಲದ ಕ್ಯಾಂಟಿನ್ ಮಾಲೀಕ ಆದಿಕೇಶವಲು ಎಂಬಾತನೇ ಕೃತ್ಯ ಎಸಗಿರುವ ವ್ಯಕ್ತಿ ಎಂದು ಮೂಲಗಳಿಂದ ತಿಳಿದುಬಂದಿದೆ.
ಆದಿಕೇಶವಲು ಎಂಬಾತ ವಿಶ್ವವಿದ್ಯಾಲಯ ಆವರಣದಲ್ಲಿ ಕ್ಯಾಂಟೀನ್ ನಡೆಸುತ್ತಿದ್ದ ಎನ್ನಲಾಗಿದ್ದು, ಎಂ.ಎ ಎಕಾನಾಮಿಕ್ಸ್ ವಿದ್ಯಾರ್ಥಿನಿಯೊಬ್ಬಳನ್ನು ಕ್ಯಾಂಟಿನ್ ನಲ್ಲಿನ ಖಾಸಗಿ ರೂಮ್ ಗೆ ಕರೆದೊಯ್ದು ಚುಂಬಿಸಿರುವ ಆರೋಪ ಕೇಳಿಬಂದಿದೆ. ಇದನ್ನು ಪ್ರಶ್ನಿಸಿದಕ್ಕೆ ʼನೀನು ನನ್ನ ಮಗಳ ಹಾಗೆ' ಎಂದು ಕ್ಯಾಂಟಿನ್ ಮಾಲೀಕ ಹೇಳಿದ್ದಾನೆಂದು ವಿದ್ಯಾರ್ಥಿನಿ, ವಿವಿಯ ವಿದ್ಯಾರ್ಥಿಗಳ ಕಲ್ಯಾಣ ಅಧಿಕಾರಿಗೆ ಇಮೇಲ್ ಮೂಲಕ ಸಲ್ಲಿಸಲಾದ ದೂರಿನಲ್ಲಿ ಉಲ್ಲೇಖಿಸಿದ್ದಾಳೆ ಎಂದು ತಿಳಿದುಬಂದಿದೆ.
ಘಟನೆ ಕಳೆದ ಏಪ್ರಿಲ್ 16 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಿದ್ಯಾರ್ಥಿನಿಯ ಆರೋಪದಿಂದ ಎಚ್ಚೆತ್ತುಕೊಂಡ ವಿವಿಯ ಆಡಳಿತ ಮಂಡಳಿಯು, ಕ್ಯಾಂಟಿನ್ ಓನರ್ ನ ಗುತ್ತಿಗೆಯನ್ನು ರದ್ದು ಮಾಡಿ ಆತನನ್ನು ಹೊರಗೆ ಹಾಕಲಾಗಿದೆ ಎಂದು ವಿವಿ ಮೂಲಗಳು ತಿಳಿಸಿವೆ.