ಕಲಬುರಗಿ | ಸಾಮಾಜಿಕ ಜಾಲತಾಣಕ್ಕಿಂತ ಸಮಾಜ ಮುಖ್ಯ : ಸತ್ಯಂಪೇಟೆ
ಕಲಬುರಗಿ : ಯಾವುದೋ ಭ್ರಮೆಯ ಲೋಕದಲ್ಲಿ ಮುಳುಗಿ ಗೊಂದಲದ ಗೂಡಾಗಿರುವ ಇಂದಿನ ಯುವಕರು ಸಂವಿಧಾನದ ರಕ್ಷಣೆಗೆ ಮುಂದಾಗಬೇಕು ಎಂದು ಲೇಖಕ ಡಾ.ಶಿವರಂಜನ ಸತ್ಯಂಪೇಟೆ ಹೇಳಿದರು.
ನಗರದ ಹೊರ ವಲಯದಲ್ಲಿರುವ ಪಂಚಾಯತ್ ರಾಜ್ ಇಲಾಖೆಯ ಅಬ್ದುಲ್ ನಜೀರ್ ಸಾಬ್ ತರಬೇತಿ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ 4ನೇ ದಿನದ ತರಬೇತಿ ಕಾರ್ಯಕ್ರಮದಲ್ಲಿ ಸಂವಿಧಾನ ಮತ್ತು ಮಾಧ್ಯಮ ವಿಷಯ ಕುರಿತು ಮಾತನಾಡಿದ ಅವರು, ಪ್ರಬಲ ಮಾಧ್ಯಮವಾಗಿ ಬೆಳೆಯುತ್ತಿರುವ ಸಾಮಾಜಿಕ ಜಾಲತಾಣ ನೆಚ್ಚಿಕೊಂಡಿರುವ ಯುವಕರಿಗೆ ಸಮಾಜ ಮುಖ್ಯವಾಗಬೇಕು ಎಂದು ಕರೆ ನೀಡಿದರು.
ಸಂವಿಧಾನದ ರಕ್ಷಣೆಯಲ್ಲಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮದ ಮೇಲೆ ಸಾಕಷ್ಟು ಜವಾಬ್ದಾರಿಯಿದ್ದು, ಸಂವಿಧಾನದ ಓದು ಮತ್ತು ಅನುಸರಣೆ ಬಹಳ ಅಗತ್ಯ ಎಂದು ಅವರು ಪ್ರತಿಪಾದಿಸಿದರು.
ಅಧ್ಯಕ್ಷತೆ ವಹಿಸಿದ್ದ ತರಬೇತಿ ಕೇಂದ್ರದ ಹಿರಿಯ ಕಾರ್ಯಕ್ರಮಾಧಿಕಾರಿ ನಾಗೇಶ ಹರಳಯ್ಯ ಮಾತನಾಡಿದರು.
ಈ ಸಂದರ್ಭದಲ್ಲಿ ತರಬೇತಿ ಕೇಂದ್ರದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.