×
Ad

ಕಲಬುರಗಿ | ಎರಡು ದಿನದಲ್ಲಿ ಸಕ್ಕರೆ ಕಾರ್ಖಾನೆಗಳು ಏಕರೂಪ ದರ ನಿಗದಿಪಡಿಸಬೇಕು : ಶಾಸಕ ಬಿ.ಆರ್.ಪಾಟೀಲ್‌

Update: 2025-11-03 22:11 IST

ಕಲಬುರಗಿ : ಪ್ರಸಕ್ತ 2025-26ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಬೆಳೆಯಲಾದ ಕಬ್ಬು ಇದೀಗ ಕಟಾವು ಮಾಡಬೇಕಿರುವ ಹಿನ್ನೆಲೆಯಲ್ಲಿ ರೈತರ ಹಿತದೃಷ್ಟಿಯಿಂದ ಕಲಬುರಗಿ ಜಿಲ್ಲೆಯ ಎಲ್ಲಾ ಸಕ್ಕರೆ ಕಾರ್ಖಾನೆಗಳು ಎರಡು ದಿನದಲ್ಲಿ ಏಕರೂಪ‌ ದರ ನಿಗದಿಪಡಿಸಬೇಕು ಎಂದು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ, ಆಳಂದ ಶಾಸಕ ಬಿ.ಆರ್.ಪಾಟೀಲ್‌ ಸೂಚನೆ ನೀಡಿದರು.

ಸೋಮವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳು ಹಾಗೂ ಕಬ್ಬು ಬೆಳೆಗಾರರ ರೈತ ಮುಖಂಡರೊಂದಿಗೆ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಅವರು, ದರ‌ ನಿಗದಿ ಮಾಡದೆ ಕಬ್ಬು ನುರಿಸುವ ಕಾರ್ಯಕ್ಕೆ ಅವಕಾಶ ನೀಡುವುದಿಲ್ಲ ಎಂದು ರೈತರು ಪಟ್ಟು ಹಿಡಿದಿರುವುದರಿಂದ ಕಾರ್ಖಾನೆಗಳು ವಿತ್ತಂಡವಾದ ಬಿಟ್ಟು ರೈತರಿಗೆ ನ್ಯಾಯಯುತ ದರ ಕನಿಷ್ಟ 3,000ರೂ. ಘೋಷಿಸಿ ಕಬ್ಬು ನುರಿಸುವ ಕೆಲಸ ಆರಂಭಿಸಬೇಕು ಎಂದರು.

ಈಗಾಗಲೇ ಬೆಳಗಾವಿಯಲ್ಲಿ ಪ್ರತಿ ಟನ್ ಗೆ 3,400ರೂ. ದರ ನಿಗದಿ ಮಾಡಿ ಕಾರ್ಖಾನೆಗಳು ಘೋಷಿಸಿವೆ. ಅದೇ ರೀತಿ ವಿಜಯಪುರ, ಬಾಗಲಕೋಟೆ, ಕಾರವಾರದಲ್ಲಿ ಘೋಷಿಸಲಾಗಿದೆ. ಕಳೆದ ವರ್ಷ ಇಲ್ಲಿಯೂ 2,700ರೂ. ಏಕರೂಪದ‌ ದರ ನಿಗದಿ ಮಾಡಿದ್ದೀರಿ, ಈ ವರ್ಷ ಯಾಕೆ ಇದು ಸಾಧ್ಯವಾಗುತ್ತಿಲ್ಲ ಎಂದು ಕಾರ್ಖಾನೆಗಳ ಪ್ರತಿನಿಧಿಗಳನ್ನು ಪ್ರಶ್ನಿಸಿದ ಅವರು, ನಿರ್ಣಯ ತೆಗೆದುಕೊಳ್ಳುವ ಕಾರ್ಖಾನೆಯ ಪ್ರಮುಖ ಹಂತದ ಅಧಿಕಾರಿಗಳು ಸಭೆಗೆ ಬಾರದಿರುವುದಕ್ಕೆ ಬೇಸರ ವ್ಯಕ್ತಪಡಿಸಿ ಕಾರ್ಖಾನೆಗಳು ಇಂತಹ ರೈತ ವಿರೋಧಿ ಧೋರಣೆ ಬಿಡಬೇಕು ಎಂದರು.

ಅತಿವೃಷ್ಟಿಯಿಂದ ರೈತರು ಕಂಗಾಲಾಗಿದ್ದಾರೆ. ಸ್ಥಳೀಯವಾಗಿ ಕರೆಂಟ್, ನೀರು, ವಿದ್ಯುತ್ ಪಡೆಯುವ ನೀವುಗಳು(ಕಾರ್ಖಾನೆಗಳು) ರೈತರ ವಿಷಯದಲ್ಲಿ ಉದಾರತೆ ತೋರಿಸಬೇಕು. ದರ ನಿಗದಿ ಮಾಡದೆ ಕಬ್ಬು ಕಟಾವಿಗೆ ಅವಕಾಶ‌ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಬಿ.ಆರ್.ಪಾಟೀಲ್‌ ಅವರು, ಸಭೆಯಿಂದಲೆ ಸಕ್ಕರೆ ಖಾತೆ ಸಚಿವ ಶಿವಾನಂದ ಪಾಟೀಲ್‌ ಅವರಿಗೆ ದೂರವಾಣಿ ಕರೆ ಮಾಡಿ, ರೈತರಿಗೆ ನ್ಯಾಯ ಒದಗಿಸುವಂತೆ ಕೋರಿಕೊಂಡರು.

ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಮಾತನಾಡಿ, ಕಬ್ಬಿಗೆ ದರ ನಿಗದಿ ಕುರಿತು ಈಗಾಗಲೆ ಕಾರ್ಖಾನೆ ಮತ್ತು ರೈತ ಮುಖಂಡರ ಜೊತೆ ಹತ್ತಾರು ಬಾರಿ ಸಭೆ ನಡೆಸಿದ್ದೇನೆ. ಏಕರೂಪ ದರ, ದ್ವಿಪಕ್ಷಿಯ ಒಪ್ಪಂದ, ಕಾರ್ಖಾನೆಗಳಲ್ಲಿ ರೈತರಿಗೆ ಮೂಲಸೌಕರ್ಯ ಕಲ್ಪಿಸುವುದು, ರೈತರಿಗೆ ಮೋಸವಾಗದಂತೆ ತೂಕದಲ್ಲಿ ಪಾರ್ದರ್ಶಕತೆ, ಎಸ್.ಎಂ.ಎಸ್. ಸೇವೆ ಸೇರಿದಂತೆ ಅನೇಕ ವಿಷಯಗಳ ಕುರಿತು ಲಿಖಿತವಾಗಿ ಜಿಲ್ಲಾಡಳಿತದಿಂದ ನಿರ್ದೇಶನ ನೀಡಿದ್ದರು. ಕಾರ್ಖಾನೆಯವರು ಪಾಲಿಸುತ್ತಿಲ್ಲ. ಈ ಬಗ್ಗೆ ಕಬ್ಬು ಆಯುಕ್ತರಿಗೆ ವರದಿ ನೀಡಿವೆ ಎಂದರು.

ರೈತರ ಬೇಡಿಕೆಗಳೇನು? :

ಜಿಲ್ಲೆಯಲ್ಲಿ ಕಬ್ಬಿಗೆ ಏಕರೂಪ ದರ‌ ನಿಗದಿ ಮಾಡಿಯೇ ಕಬ್ಬು ಕಟಾವು ಮಾಡಬೇಕು. ಕಬ್ಬು ಕಟಾವಿನಲ್ಲಿ ತಾರತಮ್ಯ ಮಾಡಬಾರದು ಮತ್ತು ನಿಗದಿಯಂತೆ ಸರಿಯಾದ ಸಮಯಕ್ಕೆ ಕಟಾವು ಮಾಡಬೇಕು. ತೂಕದಲ್ಲಿ ಮೋಸ ತಪ್ಪಿಸಲು ಕಾರ್ಖಾನೆ ಗೇಟ್ ಬಳಿ ತೂಕ ಮಾಡಿಯೇ ಕಬ್ಬು ತೆಗೆದುಕೊಳ್ಳಬೇಕು. ಹಣ ಪಾವತಿ ಮತ್ತು ಬಾಕಿ ಕುರಿತು ಎಸ್.ಎಂ.ಎಸ್ ಕಳುಹಿಸಬೇಕು ಮತ್ತು ಕಟಾವು ವಿಷಯದಲ್ಲಿ ರೈತರ ನಡುವೆ ಎತ್ತಿಕಟ್ಟುವ ಧೋರಣೆ ಕಾರ್ಖಾನೆಗಳು ಬಿಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಶರಣಬಸಪ್ಪ ಮಮಶೆಟ್ಟಿ, ಮಹಾಂತಗೌಡ ನಂದಳ್ಳಿ ಸೇರಿದಂತೆ ಅನೇಕ ರೈತ ಮುಖಂಡರು ಸಭೆ ಮುಂದಿಟ್ಟರು.

ಸಭೆಯಲ್ಲಿ ಅಫಜಲಪೂರ ಶಾಸಕ ಎಂ.ವೈ.ಪಾಟೀಲ್‌, ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಭೀಮರಾವ್‌, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ತೋಟಗಾರಿಕೆ ಉಪನಿರ್ದೇಶಕ ಸಂತೋಷ ಇನಾಂದಾರ ಸೇರಿದಂತೆ ಕಲಬುರಗಿ ಜಿಲ್ಲೆಯ ಕೆ.ಪಿ.ಆರ್ ಶುರ‍್ಸ್ & ಅಪ್ಪಾರೆಲ್ಸ್ ಲಿ., ಎನ್.ಎಸ್.ಎಲ್. ಶುಗರ‍್ಸ್, ಶ್ರೀ ರೇಣುಕಾ ಶುರ‍್ಸ್ ಲಿ., ದಿ.ಉಗಾರ್ ಶುಗರ್ ವರ್ಕ್ಸ್ ಲಿ., ಸಿದ್ದಸಿರಿ ಸೌಹಾರ್ದ ಸಹಕಾರಿ ನಿ. ಹಾಗೂ ಯಾದಗಿರಿ ಜಿಲ್ಲೆಯ ಕೋರ್ ಗ್ರೀನ್ ಶುಗರ್ & ಪ್ಯುಯೆಲ್ಸಸ್ ಪ್ರೈ.ಲಿ. ಕಾರ್ಖಾನೆಯ ಪ್ರತಿನಿಧಿಗಳು, ರೈತ ಮುಖಂಡರು, ವಿವಿಧ ರೈತ ಸಂಘಟನೆಗಳ ಪದಾಧಿಕಾರಿಗಳು ಚರ್ಚೆಯಲ್ಲಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News