Kalaburagi |ಟೀಕೆಕರ್ವಾಡಿ ಯಾರ್ಡ್ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ಬದಲಾವಣೆ, ಕೆಲವು ರೈಲುಗಳು ರದ್ದು
ಸಾಂದರ್ಭಿಕ ಚಿತ್ರ
ಕಲಬುರಗಿ: ಟೀಕೆಕರ್ವಾಡಿ ಯಾರ್ಡ್‌ನಲ್ಲಿ ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ವ್ಯವಸ್ಥೆ ಅಳವಡಿಕೆ ಹಾಗೂ ಮೇಲ್ದರ್ಜೆ ಕಾಮಗಾರಿಗಳ ಹಿನ್ನೆಲೆಯಲ್ಲಿ ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗವು ಜೂನ್ 5ರಿಂದ 10ರವರೆಗೆ ಸಂಚಾರ ನಿರ್ಬಂಧಗಳನ್ನು ಜಾರಿಗೊಳಿಸಿದೆ. ಇದರ ಪರಿಣಾಮವಾಗಿ ಹಲವು ರೈಲುಗಳ ಸಂಚಾರದಲ್ಲಿ ವಿಳಂಬ, ಮಾರ್ಗ ಬದಲಾವಣೆ, ಮರುನಿಗದೀಕರಣ ಹಾಗೂ ರದ್ದತಿ ಕ್ರಮ ಕೈಗೊಳ್ಳಲಾಗಿದೆ ಎಂದು ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಿದೆ.
ಕಾಮಗಾರಿಯ ಅವಧಿಯಲ್ಲಿ ಕೆಲವು ಪ್ರಮುಖ ರೈಲುಗಳ ಸಂಚಾರವನ್ನು ನಿಯಂತ್ರಿಸಲಾಗುತ್ತದೆ. ಜೂನ್ 5ರಂದು ಸೋಲಾಪುರ–ಹಾಸನ ಎಕ್ಸ್‌ಪ್ರೆಸ್ ಹಾಗೂ ಬಾಗಲಕೋಟೆ–ಮೈಸೂರು ಬಸವ ಎಕ್ಸ್‌ಪ್ರೆಸ್ ತಲಾ 45 ನಿಮಿಷಗಳ ಕಾಲ ವಿಳಂಬವಾಗಲಿವೆ.
ಜೂನ್ 8ರಂದು ಎಲ್‌ಟಿಟಿ ಮುಂಬೈ–ವಿಶಾಖಪಟ್ಟಣ ಎಕ್ಸ್‌ಪ್ರೆಸ್ ಎರಡು ಗಂಟೆಗಳ ಕಾಲ, ಸೋಲಾಪುರ–ಕಲಬುರಗಿ ವಿಶೇಷ ರೈಲು ಒಂದು ಗಂಟೆ 30 ನಿಮಿಷಗಳ ಕಾಲ, ಪಂಢರಪುರ–ಮೈಸೂರು ಗೋಲ್ಗುಂಬಜ್ ಎಕ್ಸ್‌ಪ್ರೆಸ್ ಹಾಗೂ ಸಿಎಸ್‌ಎಂಟಿ ಮುಂಬೈ–ಕೆಎಸ್‌ಆರ್ ಬೆಂಗಳೂರು ಉದ್ಯಾನ ಎಕ್ಸ್‌ಪ್ರೆಸ್ ತಲಾ 30 ನಿಮಿಷಗಳ ಕಾಲ ನಿಯಂತ್ರಣದಲ್ಲಿರಲಿವೆ.
ಜೂನ್ 9ರಂದು ಕನ್ಯಾಕುಮಾರಿ–ಪುಣೆ ಎಕ್ಸ್‌ಪ್ರೆಸ್ ಒಂದು ಗಂಟೆ 15 ನಿಮಿಷಗಳ ಕಾಲ ಹಾಗೂ ಭುವನೇಶ್ವರ–ಸಿಎಸ್‌ಎಂಟಿ ಮುಂಬೈ ಎಕ್ಸ್‌ಪ್ರೆಸ್ 40 ನಿಮಿಷಗಳ ಕಾಲ ವಿಳಂಬವಾಗಲಿದೆ.
ಮಾರ್ಗ ಬದಲಾವಣೆ :
ವಿಜಯಪುರ–ರಾಯಚೂರು ಪ್ಯಾಸೆಂಜರ್ (57662) ಹಾಗೂ ರಾಯಚೂರು–ವಿಜಯಪುರ ಪ್ಯಾಸೆಂಜರ್ (57661) ರೈಲುಗಳನ್ನು ಜೂನ್ 5ರಿಂದ 10ರವರೆಗೆ ಹೋಟ್ಗಿ–ವಾಡಿ ಮಾರ್ಗದ ಮೂಲಕ ಸಂಚರಿಸಲಾಗುತ್ತದೆ. ಈ ಅವಧಿಯಲ್ಲಿ ಹೋಟ್ಗಿ–ಸೋಲಾಪುರ–ಹೋಟ್ಗಿ ನಡುವೆ ಸೇವೆ ಲಭ್ಯವಿರುವುದಿಲ್ಲ.
ಮರುನಿಗದೀಕರಣ :
ಜೂನ್ 10ರಂದು ಪಂಢರಪುರ–ಮೈಸೂರು ಗೋಲ್ಗುಂಬಜ್ ಎಕ್ಸ್‌ಪ್ರೆಸ್ ರೈಲನ್ನು ಮಧ್ಯಾಹ್ನ 3.20 ಗಂಟೆಗೆ 2 ಗಂಟೆ 20 ನಿಮಿಷಗಳ ವಿಳಂಬದೊಂದಿಗೆ ಮರುನಿಗದಿಪಡಿಸಲಾಗಿದೆ. ಅದೇ ದಿನ ಸಿಎಸ್‌ಎಂಟಿ ಮುಂಬೈ–ಕೆಎಸ್‌ಆರ್ ಬೆಂಗಳೂರು ಉದ್ಯಾನ ಎಕ್ಸ್‌ಪ್ರೆಸ್ ರೈಲನ್ನು ಬೆಳಿಗ್ಗೆ 10.10 ಗಂಟೆಗೆ 2 ಗಂಟೆ 15 ನಿಮಿಷಗಳ ವಿಳಂಬದೊಂದಿಗೆ ಮರುನಿಗದಿಪಡಿಸಲಾಗಿದೆ.
ಎರಡು ವಿಶೇಷ ರೈಲುಗಳ ರದ್ದತಿ :
ಜೂನ್ 10ರಂದು ಸಂಚರಿಸಬೇಕಿದ್ದ ಸೋಲಾಪುರ–ಕಲಬುರಗಿ ವಿಶೇಷ ರೈಲು (01465) ಹಾಗೂ ಕಲಬುರಗಿ–ಸೋಲಾಪುರ ವಿಶೇಷ ರೈಲು (01466)ಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.