ಕಲಬುರಗಿ | ಬಹಮನಿಗಳು ದಕ್ಷಿಣದ ಪರ್ಯಾಯ ಮಾರ್ಗದ ವಾರಸುದಾರರು: ಡಾ.ವೀರಶೆಟ್ಟಿ
ಕಲಬುರಗಿ: 12ನೇ ಶತಮಾನದ ಶರಣರಂತೆ ಬಹಮನಿಗಳು (ಬಂದೇ ನವಾಜರು) ಪ್ರಾದೇಶಿಕ ಭಾಷೆಗೆ ಹೆಚ್ಚಿನ ಮಹತ್ವ ನೀಡಿದರು. ಅಂದಿನ ಕಾಲಕ್ಕೆ ಕಾವ್ಯ ರಚನೆಗೆ ಪಾರ್ಸಿ ಭಾಷೆಯೇ (ಸಂಸ್ಕೃತದಂತೆ ದೈವಭಾಷೆ) ಶ್ರೇಷ್ಠವೆಂದು ನಂಬಲಾಗಿತ್ತು. ಆದರೆ ಬಂದೇ ನವಾಜರು ಈ ಪರಂಪರೆಯನ್ನು ಮುರಿದು ಪ್ರಾದೇಶಿಕ ಭಾಷೆಯಾಗಿದ್ದ ಉರ್ದು ಮತ್ತು ದಖನಿಯಲ್ಲಿ ತಮ್ಮ ಕಾವ್ಯಗಳನ್ನು ರಚಿಸಿದರು. ಇದು ಉತ್ತರದ ಮೀಮಾಂಸೆಯನ್ನು ಮುರಿದ ಪಂಪ, ಶ್ರೀವಿಜಯ, ಬಸವಣ್ಣನವರ ಈ ನೆಲದ ಮುಂದುವರೆದ ಪರ್ಯಾಯ 'ದಕ್ಷಿಣಮಾರ್ಗ'ವಾಗಿತ್ತೆಂದು ವಿಭಾಗೀಯ ಪತ್ರಗಾರ ಕಚೇರಿಯ ಹಿರಿಯ ಸಹಾಯಕ ನಿರ್ದೇಶಕ ಡಾ.ವೀರಶೆಟ್ಟಿಯವರು ಅಭಿಪ್ರಾಯಪಟ್ಟರು.
ಇಲ್ಲಿನ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ ವಿಭಾಗೀಯ ಪತ್ರಗಾರ ಕಚೇರಿ ಕಲಬುರಗಿಯ ವತಿಯಿಂದ ಹಮ್ಮಿಕೊಂಡಿದ್ದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು 'ಬಹಮನಿ ಕಾಲದ ಧಾರ್ಮಿಕ ಪರಿಸರ' ಎಂಬ ವಿಷಯದ ಕುರಿತು ತಮ್ಮ ಉಪನ್ಯಾಸ ನೀಡಿದರು.
ಧರ್ಮ, ರಾಜಕಾರಣ ಮಾಡುತ್ತಿರುವ ಹಾಗೂ ರಾಜಕಾರಣ, ಧರ್ಮವನ್ನು ಒಳಗು ಮಾಡಿಕೊಂಡು ಆಡಳಿತ ನಡೆಸುತ್ತಿರುವ ಸಂದಿಗ್ಧ ಸಂದರ್ಭದಲ್ಲಿ ನಾವು, ಪ್ರಭುತ್ವ ಮತ್ತು ಧರ್ಮದ ವ್ಯಾಪ್ತಿ-ವೈಶಾಲ್ಯತೆಯ ಬಗ್ಗೆ ಮರುಚಿಂತಿಸಬೇಕಾದ ಅನಿವಾರ್ಯತೆ ಬಂದೊದಗಿದೆ. ಅದರ ಭಾಗವಾಗಿ ಈ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
'ಪ್ರಜ್ಞೆ' ಮತ್ತು 'ಪ್ರಭುತ್ವ' ಎರಡು ಎದುರು ಬದುರಾಗಿರುವ ಕಾಲಮಾನವಿದು. ಪ್ರಜ್ಞೆ ಯಾವುದನ್ನು ಬೇಕು ಎಂದು ಒತ್ತಾಯಿಸುತ್ತದೋ, ಪ್ರಭುತ್ವ ಅದನ್ನು ಬೇಡ ಎಂದು ತಿರಸ್ಕರಿಸುತ್ತದೆ. ಇದಕ್ಕೆ ನಮ್ಮ ಚರಿತ್ರೆ ಮುಖಾಮುಖಿಯಾಗಬಲ್ಲದು ಎಂದರು.
ಲಿಚ್ಛವಿ ಗಣರಾಜ್ಯ ಭಾರತದ ಮೊದಲ ಸ್ಥಾಪಿತ ರಾಜಪ್ರಭುತ್ವವಾಗಿದೆ. ಲಿಚ್ಛವಿಯ ಅರಸ ಮತ್ತು ಜನರು ಒಮ್ಮೆ ಬುದ್ಧನಿಗೆ ರಾಜಪ್ರಭುತ್ವ ಹೇಗಿರಬೇಕೆಂದು ಕೇಳಿದಾಗ, “ಆಳುವ ಅರಸನ ಮನಸ್ಸು ಪಾರದರ್ಶಕವಾಗಿರಬೇಕು” ಎಂಬರ್ಥದಲ್ಲಿ ಬುದ್ಧ ಉಪದೇಶ ಮಾಡಿದ್ದರಂತೆ. ಕಾಳಿದಾಸ ಕೂಡ ತನ್ನ ರಘುವಂಶ ಕೃತಿಯಲ್ಲಿ ಅರಸನಾದವನು ಹೇಗಿರಬೇಕು ಎಂಬ ಮಾದರಿಯನ್ನು ಮುಂದಿಡುತ್ತಾ, “ಪ್ರಜಾನಾಂ ವಿನಯಾದಾನಾತ್ ರಕ್ಷಣಾಥ್ ಭರಣಾದಪಿ ಸಪಿತಾ ತಾಸಾಂಪಿತಾಃ ಕೇವಲಂ ಜನ್ಮಹೇತವಃ” ಎನ್ನುತ್ತಾನೆ.
ಅಂದರೆ ತಂದೆ-ತಾಯಿಗಳು ಕೇವಲ ಜನ್ಮ ನೀಡುತ್ತಾರಷ್ಟೆ. ಪ್ರಜೆಗಳ ಉಳಿದೆಲ್ಲ ಜವಾಬ್ದಾರಿಗಳನ್ನು ಅರಸನಾದವನೇ ಹೊರಬೇಕಾಗುತ್ತದೆ ಎಂಬುದು ಇದರರ್ಥ. ಆದರೆ ಪ್ರಸ್ತುತದ ಮಟ್ಟಿಗೆ ಪ್ರಭುತ್ವ, 'ರಾಜಾ ಪ್ರತ್ಯಕ್ಷ ದೇವತಃ' ವಾಗಿರುವ ಹೊತ್ತಲ್ಲಿ, ಚರಿತ್ರೆಯ ಪುಟಗಳಿಂದ ಆ ಮಾದರಿಯ ಘಟ್ಟಗಳನ್ನು ಹೊರತರುವ ಮೂಲಕ ನವಸಮಾಜದ ನಿರ್ಮಾಣಕ್ಕೆ ಬೇಕಾದ ಮನಸ್ಸುಗಳನ್ನು ಜೋಡಿಸುವ ಕೆಲಸ ನಾವಿಂದು ಮಾಡಬೇಕಿದ್ದು, ಬಹಮನಿಗಳು ಬಹುಸಂಖ್ಯಾತ ಅನ್ಯಧರ್ಮಗಳ ಮಧ್ಯೆ ಹೇಗೆ 'ಸರ್ವೇಶಾಂ ಹಿತಕಾರಿಣಿ' ಮಾದರಿಯ ಆಡಳಿತ ಈ ನೆಲಕ್ಕೆ ಈ ನೆಲಕ್ಕೆ ನೀಡಿದ್ದರು ಎಂಬುದನ್ನು ನಾವಿಂದು ಶೋಧಿಸುವ ಅಗತ್ಯವಿದೆ ಎಂದರು. ಆ ನಿಟ್ಟಿನಲ್ಲಿ ಈ ವಿಚಾರ ಸಂಕಿರಣ ಹೊಸ ಹೊಳಹುಗಳನ್ನು ಈ ನಾಡಿಗೆ ನೀಡಲಿದೆ ಎಂದ ಅವರು, ಇದರಲ್ಲಿಯೇ ನಮ್ಮ ದೇಶದ ಮತ್ತು ನಾಡಿನ ಭವಿತವ್ಯವೂ ಅಡಗಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಉತ್ತರ ಭಾರತದಲ್ಲಿ ಮುಸ್ಲಿಂರ ಆಗಮನಕ್ಕೂ ಪೂರ್ವದಲ್ಲಿಯೇ ಕೆಲವು ಸೂಫಿಗಳು ದಕ್ಷಿಣ ಭಾರತ ಹಾಗೂ ಶ್ರೀಲಂಕಾಗಳಲ್ಲಿ ಕ್ರಿಯಾಶೀಲರಾಗಿದ್ದರೆಂಬ ಉಲ್ಲೇಖಗಳು ಇಬ್ನ್ ಬತೂತನ ಬರವಣಿಗೆಗಳಲ್ಲಿ ನಮಗೆ ಸಿಗುತ್ತವೆ. ಹಿಂದೂ ದೊರೆಯ ರಾಜಾಡಳಿತಕ್ಕೆ ಒಳಪಟ್ಟ ಮಲಬಾರಿನ ತೀರದಲ್ಲಿ ಆತ ಕೆಲವು ಸೂಫಿಗಳಿಗೆ ಆಶ್ರಯ ನೀಡಿದ್ದನೆಂದು ಹೇಳಲಾಗುತ್ತದೆಯಾದರೂ, ಈ ಬಗ್ಗೆ ನಮಗೆ ಖಚಿತ ಆಕರಗಳು ಸಿಗುವುದಿಲ್ಲ. ಆದರೆ ಕ್ರಿ.ಶ.1327ರಲ್ಲಿ ಮುಹಮ್ಮದ್ ಬಿನ್ ತುಘಲಕ್‌ನ ರಾಜಧಾನಿ ವರ್ಗಾವಣೆಯಿಂದಾಗಿ ದೌಲತಾಬಾದಿನಲ್ಲಿ ಒಂದು ಹೊಸ ನಾಗರೀಕ ಸಮಾಜ ತಲೆ ಎತ್ತಿತು. ಅದರಿಂದಾಗಿ ಚಿಸ್ತಿಯಾ, ಜುನೈದಿಯಾ ಸಿಲ್‌ಲಾದ ಅಧಿಕ ಸಂಖ್ಯೆಯ ಸೂಫಿಗಳು ದಖ್ಖನಿಗೆ ವಲಸೆ ಬರುವಂತಾಯಿತು. ಮುಂದೆ ಈ ಭಾಗದಲ್ಲಿ ಹುಟ್ಟಿಕೊಂಡ ಮುಸ್ಲಿಂ ಸಾಮ್ರಾಜ್ಯಗಳಾದ ಬಹಮನಿ, ಫಾರೂಖಿ ಹಾಗೂ ಖಾಂದೇಶಗಳಿಂದಾಗಿ ಈ ಭಾಗದ ಬಿಜಾಪುರ, ಗುಲ್ಬರ್ಗಾ ಮತ್ತು ಬೀದರ್‌ಗಳು ಸಮಾಜೋ-ಧಾರ್ಮಿಕವಾಗಿ ಮಿಶ್ರ ಸಂಸ್ಕೃತಿಯ ಸಂಕರವೊಂದನ್ನು ಕಾಣುವಂತಾಯಿತು. (ಬೋಡೆ ರಿಯಾಝ್ ಅಹ್ಮದ್ ತಿಮ್ಮಾಪುರಿ, ಪ್ರೇಮ, ಸೂಫಿ ಬಂದೇ ನವಾಜ್, ನ್ಯೂಸ್ ಪ್ಲಸ್ ಕಮ್ಯುನಿಕೇಷನ್ಸ್, ಬೆಂಗಳೂರು-2018) ಇದರ ಫಲವೆಂಬಂತೆ, ಬಹಮನಿಗಳ ರಾಜಕೀಯ ಮತ್ತು ಆರ್ಥಿಕ ಚಟುವಟಿಕೆಗಳು, ತಮ್ಮ ಹಿಂದಿನ ಪೂರ್ವಾಧಿಕಾರಿಗಳಾದ ಉತ್ತರ ಭಾರತದ ಮಾದರಿಯನ್ನು ಅನುಸರಿಸಿದರೆ, ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ದಖ್ಖನ್ನಿನ ಧಾರ್ಮಿಕ ನೀತಿಯನ್ನು ಅನುಸರಿಸಿದ್ದವು. ಅದರಲ್ಲಿ ಸೂಫಿ ಮತ್ತು ಸಂತರ ಸಮಾಗಮವಿತ್ತು. ಬಹಮನಿ ಕಾಲದ ಸಮಾಜ ಸ್ಥಳೀಯ ಸಂತರು, ವಿದ್ವಾಂಸರಲ್ಲದೆ, ಪರ್ಶಿಯಾ, ಇರಾನ್, ಇರಾಕ್ ಮತ್ತು ಮಧ್ಯಪ್ರಾಚ್ಯ ಪ್ರದೇಶಗಳಿಂದಲೂ ಆಗಮಿಸಿದ್ದ ಬುದ್ದಿಜೀವಿಗಳು ಹಾಗೂ ಸೂಫಿ ಸಂತರಿಂದ ಕೂಡಿತ್ತು. ಇದು ಈ ಭಾಗದಲ್ಲಿ ಅಂದಿನ ಭಾರತಮಟ್ಟದ ಸಮಾಜಕ್ಕಿಂತಲೂ ಭಿನ್ನವಾದ ಸಾಮಾಜಿಕ ಮತ್ತು ಧಾರ್ಮಿಕ ರಚನೆಗೆ ಇಂಬು ಕೊಟ್ಟಿತು.
15ನೆಯ ಶತಮಾನದಲ್ಲಿ ದೆಹಲಿಯ ದೊರೆಯಾಗಿದ್ದ ಹುಮಾಯೂನನು ದಕ್ಷಿಣದ ಭಾಗಗಳ ಮೇಲೆ ದಂಡೆತ್ತಿ ಬಂದಾಗ, ಅವನ ಸೈನ್ಯದ ದಬ್ಬಾಳಿಕೆಯ ವಿರುದ್ಧ ಬಂಡೆದ್ದು, ಬಡ ಬ್ರಾಹ್ಮಣನ ಮಗಳನ್ನು ರಕ್ಷಿಸಿದ ಕೀರ್ತಿ ದೊಡವಾಡಿಯ 'ಹಜರತ್ ಸೈಯದ್ ಷಾ ಇಸ್ಮಾಯಿಲ್ ಖಾದ್ರಿ' ಅವರಿಗೆ ಸಲ್ಲುತ್ತದೆ. ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಘೋಡವಾಡಿಯಲ್ಲಿರುವ ಈ ಸಂತನ ಸಮಾಧಿಗೆ ಇಂದಿಗೂ ಹಿಂದೂ ಮುಸ್ಲಿಂರೆನ್ನದೆ ಎಲ್ಲ ಧರ್ಮಗಳ ಜನರು ನಡೆದುಕೊಳ್ಳುತ್ತಾರೆ. ಬೀದರ್ ನಗರ ನಿರ್ಮಾಣದ ಸಂದರ್ಭದಲ್ಲಿ ಬಾದ್‌ಶಾಹನು ಜೋತಿಷ್ಯಗಾರರನ್ನು ಕರೆದು ಶುಭಮೂಹೂರ್ತ ಕೇಳಿದ'ನೆಂದು" ಬೀದರ್‌ಗೆ ಭೇಟಿ ನೀಡಿದ ಮುಹಮ್ಮದ್ ಖಾಸಿಂ ಫೆರಿಸ್ತಾ ತನ್ನ ನೆನಪುಗಳಲ್ಲಿ ಬರೆದುಕೊಂಡಿದ್ದಾರೆ. ಇದು ಉಳಿದ ಯಾವ ಲಿಖಿತ ಆಕರಗಳ ನಿರಾಕರಣೆಯ ಮಾತಲ್ಲ. ಏಕೆಂದರೆ ನಾವು ಇತಿಹಾಸದ ಪೂಜಾರಿಗಳಾಗಬೇಕೆ ಹೊರತು ಗುಲಾಮರಲ್ಲ. ಆ ಮೂಲಕ ರೂಪಗೊಳ್ಳುವ ಹೊಸ ದೃಷ್ಟಿಕೋನದ ಮುಖೇನ ಕರ್ನಾಟಕ ಜನತೆಯ ಆರ್ಥಿಕ ಸ್ಥಿತಿ, ಮಾನವೀಯ ಸಂಬಂಧ, ಸಂಘರ್ಷ, ಸಂಕುಚಿತತೆ, ಔದಾರ್ಯ ಹೀಗೆ ಎಷ್ಟೋ ಸಂಗತಿಗಳನ್ನು ಅರಿತುಕೊಳ್ಳಬಹುದು. “ತಾತ್ವಿಕ ನೆಲೆಯಲ್ಲಿ ನಡೆದಿರಬಹುದಾದ ಈ ಕೊಡುಕೊಳೆ ಜನಪರಂಪರೆಯ ಒಳಗೆ ಸಾಂಸ್ಕೃತಿಕ ಕೊಡುಕೊಳೆಯಾಗಿ ಗುಪ್ತಗಾಮಿನಿಯಂತೆ ಹರಿಯುತ್ತಿರುತ್ತದೆ” ಎಂಬುದನ್ನು ನಾವು ಮರೆಯುವಂತಿಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಲಬುರಗಿಯ ಎಂ.ಎಸ್. ಐ. ಕಾಲೇಜಿನ ಪ್ರಾಂಶುಪಾಲರಾದ ಮಲ್ಲಪ್ಪ ಬೋತಗಿಯವರು ಈ ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದರು. ಪತ್ರಕರ್ತರಾದ ಸಂಗಮನಾಥ ರೇವತಗಾಂವ ಅವರು ಗೌರವ ಉಪಸ್ಥಿತರಿದ್ದರು.