×
Ad

ನಂದಿನಿ ಬ್ರ್ಯಾಂಡ್ ಅನ್ನು ದೇಶದಲ್ಲೇ ನಂ.1 ಸ್ಥಾನಕ್ಕೆ ತರುವತ್ತ ಕೆಎಂಎಫ್ ಮುಂದಾಗಬೇಕು: ಸಿಎಂ ಸಿದ್ದರಾಮಯ್ಯ

ಮುಖ್ಯಮಂತ್ರಿಗಳಿಂದ 500 ನಂದಿನಿ ಮಾರಾಟ ಮಳಿಗೆ ಉದ್ಘಾಟನೆ

Update: 2025-09-17 21:47 IST

ಕಲಬುರಗಿ: ರಾಜ್ಯದಲ್ಲಿ ಹಾಲು ಉತ್ಪಾದನೆ ಮತ್ತು ಮಾರಾಟಕ್ಕೆ ಪೂರಕ ವಾತಾವರಣವಿದ್ದು, ರಾಜ್ಯ ಸರ್ಕಾರದ ಸಹಕಾರದೊಂದಿಗೆ ನಂದಿನಿ ಬ್ರ್ಯಾಂಡ್ ಅನ್ನು ದೇಶದಲ್ಲೇ ನಂ.1 ಸ್ಥಾನಕ್ಕೆ ತರುವತ್ತ ಕೆ.ಎಂ.ಎಫ್. (ಕರ್ನಾಟಕ ಮಿಲ್ಕ್ ಫೆಡರೇಶನ್) ಮುಂದಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬುಧವಾರ ಕಲಬುರಗಿ ಬಸ್ ನಿಲ್ದಾಣದ ಬಳಿ ರಾಜ್ಯಾದ್ಯಂತ 500 ನಂದಿನಿ ಮಾರಾಟ ಮಳಿಗೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗುಜರಾತಿನ ಅಮುಲ್ ಕಂಪನಿ ದೇಶದ ಹಾಲು ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ. ಅದರ ನಂತರ ನಂದಿನಿ ಸ್ಥಾನ ಹೊಂದಿದೆ. ಪ್ರತಿ ಲೀಟರ್ ಹಾಲಿಗೆ ರೈತರಿಗೆ 5 ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ. ಇದರ ಸದುಪಯೋಗ ಪಡೆದು ಉತ್ಪಾದನೆ ಹೆಚ್ಚಿಸಿ, ನಂದಿನಿ ಬ್ರ್ಯಾಂಡ್ ನಂ.1 ಸ್ಥಾನಕ್ಕೆ ಬರಬೇಕು ಎಂದರು.

ಹಿಂದೆ ತಮ್ಮ ಸರ್ಕಾರದ ಅವಧಿಯಲ್ಲಿ (2013–18) ಕ್ಷೀರ ಭಾಗ್ಯ ಯೋಜನೆ ಜಾರಿಗೊಳಿಸಿ ಪ್ರೌಢಶಾಲಾ ವಿದ್ಯಾರ್ಥಿಗಳು ಮತ್ತು ಅಂಗನವಾಡಿ ಮಕ್ಕಳಿಗೆ 150 ಮಿ.ಲಿ ಹಾಲು ವಿತರಣೆ ಪ್ರಾರಂಭಿಸಿದ್ದರಿಂದ ಮಕ್ಕಳ ಆರೋಗ್ಯ ಹಾಗೂ ರೈತರ ಹಿತ ಕಾಪಾಡಲಾಯಿತು ಎಂದು ಸಿಎಂ ನೆನಪಿಸಿದರು.

ಪ್ರಸಕ್ತ ಅವಧಿಯಲ್ಲಿ ಎರಡು ಬಾರಿ ಪ್ರೋತ್ಸಾಹಧನ ಹೆಚ್ಚಿಸಲಾಗಿದೆ. ರಾಜ್ಯದಲ್ಲಿ ಪ್ರತಿ ದಿನ 1 ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಇದನ್ನು ಇನ್ನಷ್ಟು ಹೆಚ್ಚಿಸಬೇಕಾಗಿದೆ. ಮಾರುಕಟ್ಟೆ ವಿಸ್ತರಣೆಗೂ ಕೆ.ಎಂ.ಎಫ್ ಹೆಚ್ಚು ಗಮನ ಹರಿಸಬೇಕು. ಆಡಳಿತ ವೆಚ್ಚ ಕಡಿಮೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನಂದಿನಿ ಉತ್ಪನ್ನಗಳು ಗುಣಮಟ್ಟಕ್ಕೆ ಹೆಸರುವಾಸಿ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಿಎಂ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಎಸ್.ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಡಾ.ಅಜಯ್ ಸಿಂಗ್, ಕೆ.ಎಂ.ಎಫ್. ಎಂ.ಡಿ. ಶಿವಸ್ವಾಮಿ, ಕಲಬುರಗಿ-ಬೀದರ್‌-ಯಾದಗಿರಿ ಹಾಲು ಒಕ್ಕೂಟದ ಅಧ್ಯಕ್ಷ ಆರ್.ಕೆ.ಪಾಟೀಲ್‌, ಎಂ.ಡಿ. ಡಾ.ಪಿ.ವಿ.ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News