×
Ad

ಕಲಬುರಗಿ ಜಿಲ್ಲೆಯಲ್ಲಿನ ಸಮಸ್ಯೆ ಬಿಟ್ಟು, ಬರೀ ಮೋದಿಯವರ ವಿರುದ್ಧ ಪ್ರಿಯಾಂಕ್ ಖರ್ಗೆ ಮಾತನಾಡುತ್ತಾರೆ : ಛಲವಾದಿ ನಾರಾಯಣಸ್ವಾಮಿ

Update: 2025-05-21 20:34 IST

ಕಲಬುರಗಿ: ʼಇಲ್ಲಿನ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯಲ್ಲಿನ ಸಮಸ್ಯೆಗಳ ವಿಚಾರ ಬಿಟ್ಟು, ಬರೀ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆಯೇ ಮಾತನಾಡುತ್ತಾರೆ. ಪ್ರಧಾನಿಗಳ ಬಗ್ಗೆ ನೀವೆಷ್ಟೇ ಮಾತನಾಡಿದರೂ, ನರಿ ಮಾತನ್ನು ಗಿರಿ ಯಾವತ್ತೂ ಕೇಳಲ್ಲʼ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದರು.

ಬುಧವಾರ ನಗರದ ಬಿಜೆಪಿ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ʼಪ್ರಧಾನಿ ಮೋದಿ ಅವರ ಬಗ್ಗೆ ಮಾತನಾಡುವುದು ಬಿಟ್ಟು, ನಿಮ್ಮ ಜಿಲ್ಲೆಯಲ್ಲಿನ ಸಮಸ್ಯೆಗಳ ಕುರಿತು ಮೊದಲು ಮಾತನಾಡಿ. ಪ್ರಧಾನಿ ಮೋದಿ ಅವರ ಬಗ್ಗೆ ಹೇಳಿಕೆ ನೀಡಿದರೆ, ಅದು ನಾಯಿ ಬೊಗಳಿದಂತೆ ಆಗಲಿದೆ. ನೀವು ಎಷ್ಟು ಬೇಕಾದರೂ ಮಾತನಾಡಿಕೊಳ್ಳಿ, ದೇವಲೋಕ ಏನು ಹಾಳಾಗಲ್ಲʼ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪಾಕ್ ಉಗ್ರರು ಧರ್ಮ ಕೇಳಿ ಅಮಾಯಕ ಭಾರತೀಯರನ್ನು ಹೊಡೆದಿದ್ದಾರೆ. ಇದರ ಬಗ್ಗೆ ಮಾತನಾಡುವುದು ಬಿಟ್ಟು, ಎಷ್ಟು ವಿಮಾನ, ಮಿಸೈಲ್ ಹೋಗಿವೆ ಎಂದು ಕಾಂಗ್ರೆಸ್ ಶಾಸಕರೊಬ್ಬರು ಕೇಳುತ್ತಾರೆ. ನಮ್ಮ ಎಷ್ಟು ವಿಮಾನಗಳನ್ನು ಪಾಕಿಸ್ತಾನ ಉರುಳಿಸಿದೆ ಎಂದು ರಾಹುಲ್ ಗಾಂಧಿ ಅವರು ಕೇಳುತ್ತಾರೆ. ಹಾಗಾದರೆ, ಕಾಂಗ್ರೆಸ್‌ನವರು ಭಾರತದ ಪರವೋ ಅಥವಾ ಪಾಕಿಸ್ತಾನದ ಪರವೋ ಎಂದು ನಿರ್ಧಾರ ಮಾಡಲಿ ಎಂದರು.

ಈ ಸಂದರ್ಭದಲ್ಲಿ ಶಾಸಕರಾದ ಬಸವರಾಜ್ ಮತ್ತಿಮಡು, ಡಾ.ಅವಿನಾಶ್ ಜಾಧವ, ಬಿಜೆಪಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಅಶೋಕ್ ಬಗಲಿ, ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ್, ಮಾಜಿ ವಿ.ಪ ಸದಸ್ಯ ಅಮರನಾಥ್ ಪಾಟೀಲ್, ಬಿಜೆಪಿ ಮಾಜಿ ಅಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ, ಮಾಜಿ ಸಚಿವ ಬಾಬುರಾವ ಚವ್ಹಾಣ, ಮುಖಂಡರಾದ ಅವ್ವಣ್ಣ ಮ್ಯಾಕೇರಿ, ಶರಣಪ್ಪ ತಳವಾರ್, ಧರ್ಮಣ್ಣ ಇಟಗಿ, ಮಹದೇವ್ ಬೆಳಮಗಿ, ನಾಗರಾಜ್ ಮಹಾಗಾಂವಕರ್ ಸೇರಿ ಅನೇಕರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News