ನಿರಾಶ್ರಿತರಿಗೆ ಸೂಕ್ತ ಪರಿಹಾರ ಒದಗಿಸಿ: ಶಿವರಾಜ್ ರದ್ದೇವಾಡಗಿ
ಕಲಬುರಗಿ: ಮಹಾರಾಷ್ಟ್ರದ ಉಜ್ಜನಿ ಹಾಗೂ ಸೀನಾ ಆಣೆಕಟ್ಟುಗಳಿಂದ ಸುಮಾರು 3 ಲಕ್ಷ ಕ್ಯುಸೆಕ್ ಕ್ಕಿಂತಲೂ ಅಧಿಕ ನೀರು ಭೀಮಾ ನದಿಗೆ ಬಿಡಲಾಗಿದ್ದು, ನದಿ ತೀರದ ಅನೇಕ ಗ್ರಾಮಗಳು ಜಲಾವೃತವಾಗಿವೆ. ಇದರಿಂದ ಜನರಿಗೆ ತುಂಬಾ ಸಮಸ್ಯೆಯಾಗುತ್ತಿದೆ. ಎಲ್ಲಾ ನಿರಾಶ್ರಿತರಿಗೂ ಕೂಡ ಸೂಕ್ತ ಪರಿಹಾರ ಒದಗಿಸಬೇಕೆಂದು ನಿಕಟಪೂರ್ವ ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ ಅಧಿಕಾರಿಗಳಿಗೆ ಸೂಚಿಸಿದರು.
ಜೇವರ್ಗಿ ತಾಲೂಕಿನ ಕೊನಹಿಪ್ಪರಗಾ, ಮಂದರವಾಡ, ಕೂಡಿ, ಕೋಬಾಳ, ಮಾಹೂರ್, ಹರವಾಳ್ ಸೇರಿದಂತೆ ಪ್ರವಾಹ ಪೀಡಿತ ಗ್ರಾಮಗಳಿಗೆ ಬಿಜೆಪಿಯ ಮುಖಂಡರು ಭೇಟಿ ನೀಡಿದರು.
ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಶಿವರಾಜ್ ಪಾಟೀಲ್ ರದ್ದೇವಾಡಿ, ಮಹಾರಾಷ್ಟ್ರದ ಅಣೆಕಟ್ಟುಗಳಿಂದ ಅಧಿಕ ನೀರು ಹೊರ ಬಿಡುತ್ತಿರುವುದರಿಂದ ಭೀಮಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದ ನದಿ ದಂಡೆಯ ಗ್ರಾಮಗಳು ಜಲಾವೃತ್ತವಾಗಿವೆ. ಕೆಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿವೆ. ಅತಿವೃಷ್ಟಿ ಹಾಗೂ ಪ್ರವಾಹದಿಂದ ಜನರು ತತ್ತರಿಸಿದ್ದಾರೆ. ಅವರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಬೇಕಿದೆ ಎಂದರು.
ಈಗಾಗಲೇ ಪ್ರಾರಂಭವಾಗಿರುವ ಗಂಜಿ ಕೇಂದ್ರಗಳನ್ನು ಹೊರತುಪಡಿಸಿ ಅವಶ್ಯಕತೆ ಇರುವ ಕಡೆ ಇನ್ನೂ ಹೆಚ್ಚಿನ ಗಂಜಿ ಕೇಂದ್ರಗಳನ್ನು ಸ್ಥಾಪಿಸುವುದು. ಜನರ ಸಮಸ್ಯೆಗಳಿಗೆ ಸ್ಪಂದಿಸುವುದು. ನಿರಾಶ್ರಿತರಿಗೆ ಆಶ್ರಯ ನೀಡುವುದು ಸೇರಿದಂತೆ ಹಾನಿಗೀಡಾದ ಪ್ರದೇಶಗಳನ್ನ ಗುರುತಿಸಿ ಸೂಕ್ತ ಪರಿಹಾರವನ್ನು ನೀಡಿ ಎಂದು ಕೂಡಿ ಗ್ರಾಮಕ್ಕೆ ಆಗಮಿಸಿದ ಎ.ಸಿ ಅವರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಂಸದರಾದ ಉಮೇಶ್ ಜಾಧವ್, ಮಲ್ಲಿನಾಥ ಪಾಟೀಲ ಯಲಗೋಡ, ಬಿಜೆಪಿ ಜಿಲ್ಲಾಧ್ಯಕ್ಷರಾದ ಅಶೋಕ್ ಬಗಲಿ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶೋಭಾ ಬಾಣಿ, ರೇವಣಸಿದ್ದಪ್ಪ ಸಂಕಾಲಿ, ದೇವೇಂದ್ರ ಮುತಕೋಡ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಭಾಗೇಶ್ ಹೊತಿನಮಡು, ಮುಖಂಡರಾದ ಗುರುರಾಜ್ ಸೋಲಹಳ್ಳಿ, ಈರಣ್ಣ ಯಾದವ, ಪೀರಣ್ಣ ಗುತ್ತಾ, ಅನಿಲ ದೊಡ್ಡಮನಿ, ಮತ್ತು ಆಯಾ ಗ್ರಾಮಗಳ ಮುಖಂಡರು ಉಪಸ್ಥಿತರಿದ್ದರು.