ಪಟ್ಟಣ, ನಂದಿಕೂರ ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನು ಎಸ್‌ಸಿ ಮೀಸಲಾತಿಗೆ ಒಳಪಡಿಸಿ: ಗುಂಡಪ್ಪ ಲಂಡನಕರ್ ಆಗ್ರಹ
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಪಟ್ಟಣ ಹಾಗೂ ನಂದಿಕೂರ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಪರಿಶಿಷ್ಟ ಜಾತಿ (ಎಸ್‌ಸಿ) ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ, ಮೀಸಲಾತಿ ರೋಸ್ಟರ್‌ನಲ್ಲಿನ ಪಾರದರ್ಶಕತೆ ಹಾಗೂ ನ್ಯಾಯಸಮ್ಮತ ಹಂಚಿಕೆಯನ್ನು ಖಚಿತಪಡಿಸಬೇಕು ಎಂದು ಕಾಂಗ್ರೆಸ್ ಮುಖಂಡ ಗುಂಡಪ್ಪ ಲಂಡನಕರ್ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣ ಜಿಲ್ಲಾ ಪಂಚಾಯಿತಿ ಕ್ಷೇತ್ರ ಆರಂಭವಾದಾಗಿನಿಂದ ಈವರೆಗೆ ಪರಿಶಿಷ್ಟ ಜಾತಿಗೆ ಮೀಸಲಾತಿ ಕಲ್ಪಿಸಿಲ್ಲ. ಕಳೆದ 35 ವರ್ಷಗಳಿಂದ ಈ ಕ್ಷೇತ್ರಕ್ಕೆ ಜಿಲ್ಲಾ ಪಂಚಾಯಿತಿ ಅಥವಾ ತಾಲೂಕು ಪಂಚಾಯಿತಿ ಮಟ್ಟದಲ್ಲಿ ಪರಿಶಿಷ್ಟ ಜಾತಿಯ ಮೀಸಲಾತಿ ದೊರೆತಿಲ್ಲ. ಇದರಿಂದ ಪರಿಶಿಷ್ಟ ಜಾತಿಯ ಜನರಿಗೆ ಸಾಮಾಜಿಕ ಹಾಗೂ ರಾಜಕೀಯವಾಗಿ ಅನ್ಯಾಯವಾಗಿದೆ ಎಂದು ಆರೋಪಿಸಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಹೀಗಾಗಿ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ನಿಗದಿಪಡಿಸುವಾಗ ಸಂಬಂಧಿತ ಕಾನೂನು, ಸರ್ಕಾರದ ನಿಯಮಗಳು, ಮೀಸಲಾತಿ ರೋಸ್ಟರ್ ಪದ್ಧತಿ ಹಾಗೂ ಅಧಿಕೃತ ಜನಸಂಖ್ಯೆಯ ಅಂಕಿಅಂಶಗಳನ್ನು ಪಾರದರ್ಶಕವಾಗಿ ಪರಿಗಣಿಸಬೇಕು ಎಂದು ಹೇಳಿದರು.
ಈ ತಿಂಗಳಲ್ಲಿ ಪಟ್ಟಣ ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನು ಮೊದಲು ಪರಿಶಿಷ್ಟ ಜಾತಿಗೆ ಮೀಸಲಾದ ಕ್ಷೇತ್ರವೆಂದು ಪ್ರಕಟಿಸಿ, ಕೇವಲ ಎರಡು ದಿನಗಳಲ್ಲೇ ಸಾಮಾನ್ಯ ಕ್ಷೇತ್ರವೆಂದು ಬದಲಾಯಿಸಲಾಗಿದೆ ಎಂದು ಲಂಡನಕರ್ ಆರೋಪಿಸಿದರು. ಈ ಹಿಂದೆಯೂ ಎರಡು ಬಾರಿ ಮಹಿಳಾ ಮೀಸಲಾತಿ ಎಂದು ಪ್ರಕಟಿಸಿ, ಬಳಿಕ ಬದಲಾವಣೆ ಮಾಡಲಾಗಿದೆ ಎಂದು ದೂರಿದರು.
ಪಟ್ಟಣ ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನು ಪರಿಶಿಷ್ಟ ಜಾತಿಗೆ ಮೀಸಲಿಡುವ ಮೂಲಕ ದಲಿತ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದ ಅವರು, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ, ಮುಖ್ಯ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ, ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಿಗೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಶರಣಬಸಪ್ಪ ಎಸ್. ದೊಡ್ಡಮನಿ, ಮಂಜುನಾಥ ಭಂಡಾರಿ, ಅನಿಲಕುಮಾರ ಡಾಂಗೆ, ಸಂಜುಕುಮಾರ ಜವರಕರ್, ಚಂದ್ರಕಾಂತ ಬಾಲಿ ಹಾಗೂ ಧರ್ಮಣ್ಣ ಪಟ್ಟಣಕರ ಉಪಸ್ಥಿತರಿದ್ದರು.