ಕಲಬುರಗಿ ನಾಲ್ಕು ದಿಕ್ಕುಗಳಲ್ಲಿ ಸ್ಯಾಟ್‌ಲೈಟ್ ಬಸ್ ನಿಲ್ದಾಣ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭರವಸೆ
ಕಲಬುರಗಿ: ಮಹಾನಗರದಲ್ಲಿನ ಸಂಚಾರ ದಟ್ಟಣೆ ತಪ್ಪಿಸಲು ಹಾಗೂ ಕೇಂದ್ರ ಬಸ್ ನಿಲ್ದಾಣದಲ್ಲಿನ ಜನ, ಬಸ್ ದಟ್ಟಣೆ ತಪ್ಪಿಸಲು ನಗರದ ನಾಲ್ಕೂ ದಿಕ್ಕುಗಳಲ್ಲಿ ಉಪ ನಗರ ಬಸ್ ನಿಲ್ದಾಣ ನಿರ್ಮಿಸಲು ಸಾರಿಗೆ ನಿಗಮ ಸೂಕ್ತ ನಿವೇಶನಕ್ಕಾಗಿ ಹುಡುಕಾಟದಲ್ಲಿದೆ. ನಿವೇಶನ ಸಿಕ್ಕಲ್ಲಿ ಸ್ಯಾಟ್‌ಲೈಟ್ ಬಸ್ ನಿಲ್ದಾಣ ಯೋಜನೆ ರೂಪಿಸಿ ಅಭಿವೃದ್ಧಿಗೆ ಇಲಾಖೆ ಬದ್ಧವೆಂದು ಸಾರಿಗ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಸದನದಲ್ಲಿ ಕಲಬುರಗಿ ಶಾಸಕರಾದ ಅಲ್ಲಂಪ್ರಭು ಪಾಟೀಲರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ಸ್ಯಾಟ್‌ಲೈಟ್ ಬಸ್ ನಿಲ್ದಾಣ ನಿರ್ಮಾಣಕ್ಕೆ ಸ್ಥಳಬೇಕೆಂದು ಕೃಷಿ, ಕಂದಾಯ, ಉನ್ನತ ಶಿಕ್ಷಣ ಹಾಗೂ ಪಶು ಸಂಗೋಪನೆ ಇಲಾಖೆಗಳಿಗೆ ಪತ್ರ ಬರೆದು ಕೋರಿದ್ದೇವೆ. ಕೃಷಿ ಇಲಾಖೆ ತನ್ನ ಬಳಿ ಜಮೀನಿಲ್ಲವೆಂದು ಹೇಳಿದೆ. ಉಳಿದ ಇಲಾಖೆಯಿಂದ ಮಾಹಿತಿ ಬಂದಿಲ್ಲ. ನಿಗಮಕ್ಕೆ ಸೂಕ್ತ ಜಮೀನು ದೊರಕಿದ ನಂತರ ಆದ್ಯತೆ ಮೇರೆಗೆ ಮುಂಬರುವ ಅನುದಾನದಲ್ಲಿ ಕಲಬುರಗಿಯಲ್ಲಿ ಸ್ಯಾಟ್‌ಲೈಟ್ ಬಸ್ ನಿಲ್ದಾಣ ಯೋಜನೆ ಪರಿಗಣಿಸಲಾಗುತ್ತದೆ ಎಂದೂ ಸಚಿವರು ಭರವಸೆ ನೀಡಿದ್ದಾರೆ.
ಕಲಬುರಗಿ ನಾಲ್ಕೂ ದಿಕ್ಕುಗಳಲ್ಲಿ ಬೆಳೆಯುತ್ತಿದೆ. ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಿದೆ. ವಾಹನ ಸಂಚಾರವೂ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಸಾರಿಗೆ ಸೇವೆ ವಿಕೇಂದ್ರಿಕರಣವಾಗಬೇಕು. ವಿವಿಧೆಡೆ ಬಸ್ ನಿಲ್ದಾಣಗಳಾದಲ್ಲಿ ಜನ ಅಲ್ಲಲ್ಲಿ ಅವುಗಳನ್ನು ಬಳಸುತ್ತಾರೆಂದು ಶಾಸಕರು ತಮ್ಮ ಬೇಡಿಕೆ ಹಿಂದಿನ ಜನ ಕಲ್ಯಾಣದ ಮಾಹಿತಿ ಸದನದ ಗಮನಕ್ಕೆ ತಂದರು.
ಸುಸಜ್ಜಿತ 20 ಕೋಟಿ ರೂ. ವೆಚ್ಚದ ಬಸ್ ನಿಲ್ದಾಣ ನಿರ್ಮಿಸಲಾಗಿದೆ. 2025-26 ರಲ್ಲಿ 28 ಹೊಸ ಅನುಸೂಚಿ ಕಾರ್ಯಗತಗೊಳಿಸಲಾಗಿದೆ. ಕಲಬುರಗಿ ನಗರಕ್ಕೆ ಶೀಘ್ರ ಹೊಸ 25 ಬಸ್ ಬರಲಿವೆ. ಕಲಬುರಗಿ ನಗರದಲ್ಲಿ ಸಾರಿಗೆ ಬೇಡಿಕೆ ಹೆಚ್ಚುತ್ತಿದೆ. ಇದನ್ನು ಪರಿಹರಿಸಲು ಹೊಸ ಅನುಸೂಚಿ ಅಗತ್ಯಕ್ಕೆ ತಕ್ಕಂತೆ ಕಾರ್ಯಾಚರಣೆಗೆ ಕೆಕೆಆರ್‌ಟಿಸಿಗೆ ಸೂಚಿಸಲಾಗಿದೆ. ನಗರದಲ್ಲಿ 90 ಅನುಸೂಚಿಯಿಂದ ,1490 ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.