×
Ad

ಕಲಬುರಗಿ | ಮಗನ ನಾಪತ್ತೆ ಬಗ್ಗೆ ದೂರು ನೀಡಿ 1 ವರ್ಷ ಕಳೆದರೂ ಪತ್ತೆಯಾಗಿಲ್ಲ : ಅಳಲು ತೋಡಿಕೊಂಡ ತಂದೆ

Update: 2025-05-30 17:50 IST

ಕಲಬುರಗಿ: ಮಗನ ನಾಪತ್ತೆ ಬಗ್ಗೆ ದೂರು ದಾಖಲಿಸಿ ಒಂದು ವರ್ಷ ಕಳೆದರೂ ಆತನನ್ನು ಪತ್ತೆ ಹಚ್ಚದೆ ಪೊಲೀಸರು ಕಾಲಹರಣ ಮಾಡುತ್ತಿದ್ದಾರೆ ಎಂದು ನಾಪತ್ತೆಯಾದ ಬಾಲಕನ ಪೋಷಕರು ಆರೋಪಿಸಿದ್ದಾರೆ.  

ವಿನಾಯಕ ಫೀನಿಕ್ಸ್(17) ನಾಪತ್ತೆಯಾದ ಅಪ್ರಾಪ್ತ.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೀನಿಕ್ಸ್ ಶರಣಪ್ಪ ಹಂದಿಗನೂರು, ಕ್ರಿಕೆಟ್‌ ಆಡಲು ಹೋಗುವುದಾಗಿ ಹೇಳಿ ಹೋದ ಮಗನ ನಾಪತ್ತೆ ಬಗ್ಗೆ 2024ರ ಮೇ 29ರಂದು ಚೌಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ನಾನೂ ಕೂಡ ಮಗನ ಪತ್ತೆಗಾಗಿ ಹಲವು ಕಡೆ 6 ತಿಂಗಳು ಹುಡುಕಾಟ ನಡೆಸಿದ್ದೇನೆ.  ಮಗನ ಬಗ್ಗೆ  ಮಾಹಿತಿಗಾಗಿ ಪೊಲೀಸ್ ಠಾಣೆಗೆ ಹೋದರೆ ಪಿಎಸ್ಐ, ಸಿಬ್ಬಂದಿಯವರು ನಿರ್ಲಕ್ಷ ಮಾಡಿರುವುದು ಕಂಡು ಬಂದಿದೆ ಎಂದು ಹೇಳಿದರು.  

ಇದಲ್ಲದೆ ಪದೇ ಪದೇ ಪೊಲೀಸ್‌ ಠಾಣೆಗೆ ತೆರಳಿದ ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ನಗರದಲ್ಲಿ ಹೇಗೆ ಜೀವನ ಮಾಡುತ್ತಿ? ನಿನಗೆ ಸುಮ್ಮನೆ ಬಿಡುವುದಿಲ್ಲ, ನಿನ್ನ ಮೇಲೆಯೇ ಪ್ರಕರಣ ದಾಖಲಿಸಿ ಜೈಲಿಗಟ್ಟುತ್ತೇನೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್‌ ಬೆದರಿಕೆ ಹಾಕಿದ್ದಾರೆ.  ಆದ್ದರಿಂದ ಅವರ ವಿರುದ್ಧ ಕಲಬುರಗಿ ಪೀಠದ ಹೈಕೋರ್ಟ್‌ ನಲ್ಲಿ ಹೇಬಿಯಸ್ ಕಾರ್ಪಸ್ ರಿಟ್ ಅರ್ಜಿ ಹಾಕಿದ್ದೇನೆ. ಮನವಿ ಪುರಸ್ಕರಿಸಿದ ಕೋರ್ಟ್, ನನ್ನ ಮಗನನ್ನು ಹುಡುಕಿ ಕೊಡಬೇಕೆಂದು ಪೊಲೀಸರಿಗೆ ನಿರ್ದೇಶನ ನೀಡಿದೆ. ಆದರೆ ಪೊಲೀಸರು ನ್ಯಾಯಾಂಗ ನಿಂದನೆ ಮಾಡಿದ್ದಲ್ಲದೆ ನನ್ನ ಮಗನನ್ನು ಪತ್ತೆ ಹಚ್ಚುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ನನ್ನ ಮಗನನ್ನು ತಕ್ಷಣ  ಹುಡುಕಿ ಕೊಡಬೇಕೆಂದು ಆಗ್ರಹಿಸಿದ್ದಾರೆ.  

ಸುದ್ದಿಗೋಷ್ಠಿಯಲ್ಲಿ ಸಂಜೀವ್ ಕುಮಾರ್ ಡೋಂಗರಗಾವ್, ವಿನೋದಕುಮಾರ್ ಜನೆವರಿ, ಶಿವರಾಯ ಅವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News