×
Ad

ರಾಜ್ಯ ಮಟ್ಟದ ಜಯತೀರ್ಥರಾಜ ಪುರೋಹಿತ ಸ್ಮಾರಕ ಕಥಾ ಪ್ರಶಸ್ತಿ ಪ್ರದಾನ

Update: 2025-02-16 00:02 IST

ಕಲಬುರಗಿ : ಗುಲ್ಬರ್ಗ ವಿಶ್ವವಿದ್ಯಾಲಯದ ವತಿಯಿಂದ ಕೊಡ ಮಾಡುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ತುಂಬಾ ಮೌಲ್ಯಯುತವಾಗಿದೆ ಹಾಗೂ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಅನನ್ಯ ಕೊಡುಗೆಯಾಗಿದೆ ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.‌ಮಲ್ಲೇಪುರಂ ಜಿ.ವೆಂಕಟೇಶ ಅಭಿಪ್ರಾಯಪಟ್ಟರು.

ಗುಲ್ಬರ್ಗ ವಿಶ್ವವಿದ್ಯಾಲಯ ಪ್ರಸಾರಾಂಗದ ವತಿಯಿಂದ ಮಹಾತ್ಮಾಗಾಂಧಿ ಸಭಾಂಗಣದಲ್ಲಿ ಶನಿವಾರ ಜರುಗಿದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದ ಕವಿ, ಸಾಹಿತಿ ಬರಹಗಾರರಿಗೆ ಸರ್ಕಾರದ ವಿವಿಧ ಅಕಾಡೆಮಿಗಳಿಗೆ ನೇಮಕ ಹಾಗೂ ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಈಗಲೂ ಅನ್ಯಾಯವಾಗುತ್ತಿದೆ. ಇದನ್ನು ಸರಿಪಡಿಸುವ ಕೆಲಸ ಸರ್ಕಾರ ಮಾಡಬೇಕು ಎಂದು ಹೇಳಿದರು.

ಪ್ರಶಸ್ತಿ ಪ್ರದಾನ ಮಾಡಿದ ವಿಶ್ರಾಂತ ಕುಲಪತಿ ಈ.ಟಿ.ಪುಟ್ಟಯ್ಯ ಅವರು ಮಾತನಾಡಿ, ಬರವಣಿಗೆ ಒಲಿಯುವುದು ಸುಲಭದ ಕೆಲಸವಲ್ಲ. ತುಂಬಾ ಕಷ್ಟದ ಕೆಲಸ.‌ ಅದಕ್ಕೆ ಅಗತ್ಯವಾದ ಸಿದ್ಧತೆ ಮತ್ತು ಅಧ್ಯಯನದ ಬದ್ಧತೆ ಅಗತ್ಯವಾಗಿದೆ ಎಂದು ತಿಳಿಸಿದರು.

ಕವಿಮಾರ್ಗಕಾರ ಹೇಳುವಂತೆ ಕಲ್ಯಾಣ ಕರ್ನಾಟಕ ಭಾಗದ ಜನರು ಕುರಿತೋದದೆಯಂ ಕಾವ್ಯ ಪ್ರಯೋಗ ಪರಿಣತಮತಿಗಳಾಗಿದ್ದಾರೆ ಎಂದು ಅವರು ವಿವರಿಸಿದರು.

ಬರವಣಿಗೆ ಸುಲಲಿತವಾಗಿ, ಸುಂದರವಾಗಿ, ಚಿತ್ತ ಬಿತ್ತಿಯಲ್ಲಿ ಅಚ್ಚಳಿಯದೆ ಉಳಿಯುವಂತಿರಬೇಕು ಎಂದು ಪ್ರೊ.ಪುಟ್ಟಯ್ಯ ಹೇಳಿದರು.

ಪ್ರಶಸ್ತಿ ಪುರಸ್ಕೃತರ ಪರವಾಗಿ ಡಾ. ಮಲ್ಲೇಶಪ್ಪ ಸಿದ್ರಾಂಪುರ ಕುಪ್ಪಂ, ಕಥೆಯಲ್ಲಿ ಚಿನ್ನದ ಪದಕ ಪಡೆದ ಡಾ. ಸುಜಾತಾ ಛಲವಾದಿ, ಪುಸ್ತಕ ಬಹುಮಾನ ಪಡೆದ ಸಿದ್ಧರಾಮ ಹೊನ್ಕಲ್ ಅವರು ಮಾತನಾಡಿದರು.

ಕುಲಪತಿ ಪ್ರೊ.ಜಿ.ಶ್ರೀರಾಮುಲು ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಪ್ರೊ.‌ರಮೇಶ ಲಂಡನಕರ್, ಕುಲಸಚಿವ (ಮೌಲ್ಯ ಮಾಪನ) ಪ್ರೊ.ಮೇಧಾವಿನಿ ಕಟ್ಟಿ, ಸಿಂಡಿಕೇಟ್ ಸದಸ್ಯ ಎಸ್.ಪಿ. ಸುಳ್ಳದ, ವಿದ್ಯಾವಿಷಯಕ ಪರಿಷತ್ ಸದಸ್ಯ ರಾಜನಾಳಕರ್ ಲಕ್ಷ್ಮಣ ವೇದಿಕೆಯಲ್ಲಿದ್ದರು.

ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ. ಎಚ್.ಟಿ. ಪೋತೆ ಅವರು ಸ್ವಾಗತಿಸಿ ಮತ್ತು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ವಸಂತ ನಾಶಿ, ಡಾ. ಎಂ.ಬಿ. ಕಟ್ಟಿ ನಿರೂಪಿಸಿದರು.

ಕನ್ನಡ ಸೃಜನ ಪ್ರಕಾರ ಪ್ರಶಸ್ತಿ:

ಸಿದ್ಧರಾಮ ಹೊನಕಲ್ (ಕೃತಿ, ಶಾಯಿರಿಲೋಕ), ವೀರೇ೦ದ್ರ ರಾವಿಹಾಳ್ (ಡಂಕಲ್ ಪೇಟೆ), ಎಸ್. ಬಿ. ಕುಚಬಾಳ (ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್), ಚಾಂದ್‌ ಪಾಷಾ (ಒದ್ದೆಗಣ್ಣಿನ ದೀಪ), ಅರುಣಾ ನರೇಂದ್ರ (ಗದ್ದಲದೊಳಗ್ಯಾಕ ನಿಂತಿ).

ಸೃಜನೇತರ ಪ್ರಕಾರ:

ಪ್ರೊ.ಮೋಹನ್ ಕುಂಟಾರ್, ಡಾ.ಸುರೇಂದ್ರ ಕೆರಮಗಿ, ಸಿದ್ಧಲಿಂಗಪ್ಪ ಕೊಟ್ನೇಕಲ್, ಸಂಗೀತಾ ಹಿರೇಮಠ, ಅಶೋಕ ದೊಡ್ಡಮನಿ, ನಂದೀಶ್ವರ ದಂಡೆ (ವಚನ), ಚಿ.ಸಿದ್. ನಿಂಗಣ್ಣ( ಜಾನಪದ), ಲಕ್ಷ್ಮೀದೇವಿ ಶಾಸ್ತ್ರಿ , ಸದಾನಂದ ಪಾಟೀಲ್ (ಜೀವನ ಕಥನ), ಸೂರ್ಯಕಾಂತ ಸುಜ್ಯಾತ್ (ಅನುವಾದ), ಭೀಮಸಿಂಗ್ ರಾಠೋಡ(ಹಿಂದಿ), ಸಂಗಮೇಶ್ ಹಿರೇಮಠ್, ಶರಣಬಸಪ್ಪ ವಡ್ಡನಕೇರಿ ( ಇಂಗ್ಲಿಷ್), ಅಮರೇಶ್ ಯತಗಲ್ ( ಸಮಾಜ ವಿಜ್ಞಾನ), ಹನಮಂತ ಜಂಗೆ (ಶಿಕ್ಷಣ ಕ್ಷೇತ್ರ), ವಾಜಿದ ಅಕ್ತರ್ ಸಿದ್ದಿಕಿ( ಉರ್ದು), ಅಪ್ಪಾರಾವ ಅಕ್ಕೋಣಿ ( ಪ್ರಕಾಶನ), ದೇವಿಂದ್ರಪ್ಪ ಎಂ.ಸಜ್ಜನ (ಜನಪದ ಕಲಾವಿದ), ವಾಜಿಡ್ ಪಟೇಲ್, ವೆಂಕಟೇಶ್ ದಶರಥ, ಸೂರ್ಯಕಾಂತ ನಂದೂರ ( ಚಿತ್ರ ಕಲಾಕೃತಿಗಳು) ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪುಸ್ತಕ (ರಾಜ್ಯಮಟ್ಟದ ಪ್ರಶಸ್ತಿ) ವಚನ ಪ್ರಕಾರ:

ಡಾ. ಪೀ.ಎಸ್.. ಶಂಕರ (ಧರೆ ಧಗ ಧಗ), ಡಾ. ಬಿ.ಆರ್.ಅಂಬೇಡ್ಕರ್ ಪುಸ್ತಕ - ಡಾ. ಡಿ.ಶ್ರೀನಿವಾಸ ಮನಗಲ್ಲಿ ಹಾಗೂ ದಿ. ಜಯತೀರ್ಥ ರಾಜಪುರೋಹಿತ ಸ್ಮಾರಕ ದತ್ತಿ ರಾಜ್ಯಮಟ್ಟದ ಕನ್ನಡ ಕಥಾ ಸ್ಪರ್ಧೆಯಲ್ಲಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ಹಾಗೂ ಗೌರವಧನ ಹಾಗೂ ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆಗೆ ಬಹುಮಾನ ನೀಡಿ ಗೌರವಿಸಲಾಯಿತು.

ಕಥೆ ವಿಭಾಗ:

ನೌವಾರಿ ಸೀರಿ (ಚಿನ್ನದ ಪದಕ, ಲೇಖಕರು ಡಾ. ಸುಜಾತಾ ಚಲವಾದಿ), ದಿಟದ ನಡಿಗೆ (ಬೆಳ್ಳಿ ಪದಕ, ಭಾಗ್ಯಜ್ಯೋತಿ ಎಚ್.), ಅಮರ ಯೋಗಿನಿ (ಕಂಚು, ಡಾ. ಶಿವಗಂಗಾ ಬಿಲಗುಂದಿ), ಚರಂಡಿ (ಕಂಚು ಪದಕ, ಸಂಜೀವ್ ಜಗ್ಲಿ) ಹಾಗೂ ಪ್ರಮಾಣ ಪತ್ರ ನೀಡಿದ ಸುಧೀರ ಬಿರಾದಾರ ( ಕನಸೆಂಬೋ ಕುದುರೆಯನೇರಿ) ಅವರಿಗೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರೊ. ಹಾಮಾನಾ ಅವರು ಕುಲಪತಿಗಳಾಗಿದ್ದ ಸಂದರ್ಭದಲ್ಲಿ ಈಗ್ಗೆ 45 ವರ್ಷಗಳ ಹಿಂದೆ ಸ್ಥಾಪಿಸಲಾದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಇಡೀ ಕರ್ನಾಟಕಕ್ಕೆ ಮಾದರಿಯಾಗಿದೆ.ಅದನ್ನು ಮುಂದುವರಿಸಿಕೊಂಡು ಬರುವ ಮೂಲಕ ಕಲಬುರಗಿ ವಿವಿಯ ಅಸ್ಮಿತೆ ಉಳಿಸಿಕೊಂಡು ಬರುತ್ತಿದ್ದೇವೆ.

-ಪ್ರೊ. ಎಚ್.ಟಿ. ಪೋತೆ, ನಿರ್ದೇಶಕರು, ಪ್ರಸಾರಾಂಗ, ಗುವಿವಿ ಕಲಬುರಗಿ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News