ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಕರೆ ಮಾಡಿದ ಆರೋಪಿಯ ಬಂಧನ
ಕಲಬುರಗಿ: ಸರಕಾರಿ ಸ್ಥಳಗಳಲ್ಲಿ ಆರೆಸ್ಸೆಸ್ ಚಟುವಟಿಕೆಗಳನ್ನು ನಿರ್ಬಂಧಿಸುವಂತೆ ಕೋರಿ ಇತ್ತೀಚೆಗೆ ಮುಖ್ಯಮಂತ್ರಿಗೆ ಪತ್ರ ಬರೆದ ಕಾರಣಕ್ಕೆ ಬಿಜೆಪಿ, ಸಂಘ ಪರಿವಾರದ ಕೆಂಗಣ್ಣಿಗೆ ಗುರಿಯಾಗಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆಯವರಿಗೆ ಕರೆ ಮಾಡಿ ಬೆದರಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರದ ಸೊಲ್ಲಾಪುರ ನಿವಾಸಿ ದಿನೇಶ್ ನರೋಣಿ ಬಂಧಿತ ಆರೋಪಿ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಿಯನ್ನು ಕಲಬುರಗಿ ಹಾಗೂ ಬೆಂಗಳೂರಿನ ಪೊಲೀಸರು ಜಂಟಿ ತನಿಖಾ ತಂಡವು ಮಹಾರಾಷ್ಟ್ರದ ಲಾತೂರು ಎಂಬಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಸರಕಾರಿ ಸ್ಥಳಗಳಲ್ಲಿ ಆರೆಸ್ಸೆಸ್ ಚಟುವಟಿಕೆಗಳನ್ನು ನಿರ್ಬಂಧಿಸುವಂತೆ ಕೋರಿ ಸಚಿವ ಪ್ರಿಯಾಂಕ್ ಖರ್ಗೆಯವರು ಇತ್ತೀಚೆಗೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ಈ ಕಾರಣಕ್ಕೆ ಅವರಿಗೆ ಹಲವರಾರು ಬೆದರಿಕೆ ಕರೆಗಳು ಬಂದಿದ್ದವು. ತನಗೆ ಬಂದ ಬೆದರಿಕೆ ಕರೆಯೊಂದನ್ನು ರೆಕಾರ್ಡ್ ಮಾಡಿರುವ ಸಚಿವ ಪ್ರಿಯಾಂಕ್ ಖರ್ಗೆ ಅದನ್ನು ಬುಧವಾರ ಬೆಳಗ್ಗೆ ತನ್ನ ಎಕ್ಸ್ ಖಾತೆಯಲ್ಲಿ ಹಾಕಿದ್ದರು.
ಈ ಬೆದರಿಕೆ ಕರೆ ಬಗ್ಗೆ ತನಿಖೆಗಿಳಿದ ಕಲಬುರಗಿ ಹಾಗೂ ಬೆಂಗಳೂರಿನ ಪೊಲೀಸರು ಜಂಟಿ ತನಿಖಾ ತಂಡವನ್ನು ರಚಿಸಿ, ಆರೋಪಿಯ ಪತ್ತೆಗೆ ಬಲೆ ಬೀಸಿದ್ದರು. ಕೊನೆಗೂ ಆರೋಪಿಯನ್ನು ಗುರುವಾರ ಮಹಾರಾಷ್ಟ್ರದ ಲಾತೂರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.