ಸೂಫಿ ಸಂತ ಪರಂಪರೆ ಮುಂದುವರೆಸಿಕೊಂಡು ಹೋಗಬೇಕಿದೆ: ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ: ಜಿಲ್ಲೆಯಲ್ಲಿ ಸೂಫಿ-ಸಂತ ಪರಂಪರೆಯ ಬೇರುಗಳು ಆಳವಾಗಿವೆ. ಇಷ್ಟೊಂದು ಶ್ರೀಮಂತ ಸಂಸ್ಕೃತಿ ಹಾಗೂ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬೇಕಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಖ್ವಾಜಾ ಬಂದೇನವಾದ್ ದರ್ಗಾದ ಸಂದಲ್ ಮೆರವಣಿಗೆ ಹಾಗೂ ಉರುಸ್ ಹಿನ್ನೆಲೆಯಲ್ಲಿ ಖ್ವಾಜಾ ಬಂದೇನವಾಜ್ ದರ್ಗಾದ ಬಳಿ ಆಯೋಜಿಸಲಾಗಿದ್ದ ಅಖಿಲ ಭಾರತ ಕೈಗಾರಿಕಾ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಖ್ವಾಜಾ ಬಂದೇನವಾಜ ದರ್ಗಾದ ಸಜ್ಜಾದ್ ನಶೀನ್ ಸೈಯದ್ ಮೊಹಮ್ಮದ್ ಅಲಿ ಅಲ್ ಹುಸೇನಿ ಸಾಹೇಬ್ ಮಾತನಾಡಿ, ಸೂಫಿ ಪರಂಪರೆಯ ಹಿನ್ನೆಲೆಯ ಹಜರತ್ ಖಾಜಾ ಬಂದೇನವಾಜ್ ದರ್ಗಾದ ಉರೂಸ್ ಕೇವಲ ಭಾರತ ಮಾತ್ರವಲ್ಲ ಪ್ರಪಂಚದಲ್ಲೆಲ್ಲ ಪ್ರಸಿದ್ಧವಾಗಿದೆ. ಈ ಬಗ್ಗೆ ಅಧ್ಯಯನ ನಡೆಸಲು ಕೆನಡಾ ಹಾಗೂ ಇಂಗ್ಲೆಂಡ್ ದೇಶದಿಂದ ಪ್ರವಾಸಿಗರು ಬಂದು ಹೋಗಿದ್ದಾರೆ. ಉರೂಸ್ ಆಚರಣೆಗಳು ಬಹಳ ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಉರೂಸ್ ಸಂದರ್ಭದಲ್ಲಿ ವ್ಯಾಪಾರಸ್ಥರು ಬಂದು ಇಲ್ಲಿ ಅಂಗಡಿಗಳನ್ನು ಹಾಕುತ್ತಿದ್ದಾರೆ. ಇಲ್ಲಿ ಬರುವ ಎಲ್ಲರಿಗೂ ಶುಭವಾಗಲಿ ಎಂದರು.
ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಮಾತನಾಡಿ, ಕಲಬುರಗಿಯ ಈ ನೆಲ ಭ್ರಾತೃತ್ವಕ್ಕೆ ಹೆಸರಾಗಿದೆ. ಸೂಫಿ ಹಾಗೂ ಸಂತ ಪರಂಪರೆಯ ಶರಣಬಸವೇಶ್ವರ ಹಾಗೂ ಖಾಜಾ ಬಂದೇನವಾಜ್ ದರ್ಗಾ ಈ ಭಾಗದ ಎರಡು ಪ್ರಮುಖ ಧಾರ್ಮಿಕ ಕೇಂದ್ರಗಳಾಗಿವೆ. ಎಲ್ಲ ಧರ್ಮದ ಜನರು ಇಲ್ಲಿಗೆ ಬಂದು ದರ್ಶನ ಪಡೆದುಕೊಂಡು ಹೋಗುತ್ತಿದ್ದಾರೆ. ಇದು ಸಹೋದರತೆಯ ಸಂಕೇತವಾಗಿದೆ ಎಂದರು.
ವೇದಿಕೆಯಲ್ಲಿ ಶಾಸಕಿ ಕನೀಜ್ ಫಾತಿಮಾ, ಸೈದಲ್ ಹುಸೇನ್ ಸಾಬ್, ಮಹಜರ್ ಆಲಂ ಖಾನ್ ಸೇರಿದಂತೆ ಹಲವರಿದ್ದರು.