×
Ad

ನಾಲ್ಕೂ ಹುಣ್ಣಿಮೆಗಳಲ್ಲಿ ಸೂಪರ್ ಮೂನ್‌ಗಳ ಸರಮಾಲೆ!

Update: 2023-07-02 17:50 IST

ಉಡುಪಿ, ಜು.2: ಇಂದಿನಿಂದ ನಾಲ್ಕು ಹುಣ್ಣಿಮೆಗಳಲ್ಲಿಯೂ ದೊಡ್ಡ ಗಾತ್ರದ ಸೂಪರ್‌ಮೂನ್ ನೋಡುವ ಅವಕಾಶ ದೊರೆಯಲಿದೆ. ಜುಲೈ 3, ಆಗಸ್ಟ್ 1, ಆಗಸ್ಟ್ 31, ಹಾಗೂ ಸೆ.29ರ ಎಲ್ಲ ಹಣ್ಣಿಮೆಗಳು ಕೂಡ ಸೂಪರ್ ಮೂನ್‌ಗಳೇ ಆಗಿರುತ್ತದೆ.

ಸೂಪರ್‌ಮೂನ್ ಅಂದರೆ ಹುಣ್ಣಿಮೆ ದಿನ ಚಂದ್ರ ಮಾಮೂಲಿಗಿಂತ ದೊಡ್ಡದಾಗಿ ಕಾಣುವುದು. ಎಲ್ಲಾ ಹುಣ್ಣಿಮೆಗಳಲ್ಲಿ ಚಂದ್ರ ಒಂದೇ ಗಾತ್ರದಲ್ಲಿ ಕಾಣುವುದಿಲ್ಲ. ಸೂಪರ್‌ಮೂನ್‌ಗಳಲ್ಲಿ ಮಾಮೂಲಿ ಗಾತ್ರಕ್ಕಿಂತ ದೊಡ್ಡದಾಗಿ ಕಂಡರೆ, ಮೈಕ್ರೊ ಮೂನ್‌ಗಳಲ್ಲಿ ಚಿಕ್ಕದಾಗಿ ಕಾಣುತ್ತದೆ ಎನ್ನುತ್ತಾರೆ ಖಗೋಳ ಶಾಸ್ತ್ರಜ್ಞ ಡಾ.ಎ.ಪಿ.ಭಟ್ ಉಡುಪಿ.

ಇದಕ್ಕೆ ಕಾರಣ ಚಂದ್ರ ಭೂಮಿಯಿಂದ ಯಾವಾಗಲೂ ಒಂದೇ ಸಮಾನ ವಾದ ದೂರದಲ್ಲಿರುವುದಿಲ್ಲ. ಚಂದ್ರ ಭೂಮಿಯ ಸುತ್ತ ಸುತ್ತುವ ಪಥ ದೀರ್ಘ ವೃತ್ತವಾಗಿರುವುದರಿಂದ ಒಂದು ಸುತ್ತು ಸುತ್ತುವಾಗ ಒಮ್ಮೆ ಅತೀದೂರ (ಅಪೊಜಿ) ಅಪಭೂದಲ್ಲಿದ್ದರೆ ಒಮ್ಮೆ ಅತೀ ಸಮೀಪ(ಪೆರಿಜಿ) ಪರಭೂದಲ್ಲಿ ರುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಚಂದ್ರ ಭೂಮಿಗಳ ಸರಾಸರಿ ದೂರ 3,84400 ಕಿ.ಮೀ. ಸಮೀಪ ದೂರ 3,56,000 ಕಿ.ಮೀ. ಹಾಗೂ ದೂರದ ದೂರ 4,06000 ಕಿ.ಮೀ. ಹತ್ತಿರ ಬಂದಾಗ ವಸ್ತು ದೊಡ್ಡದಾಗಿ ಕಾಣುವುದು, ದೂರ ಹೊದಂತೆ ಚಿಕ್ಕದಾಗಿ ಕಾಣುವುದು ಪ್ರಕೃತಿ ನಿಯಮ. ಹಾಗಾಗಿ ಸೂಪರ್‌ಮೂನಿನ ದಿನ ಚಂದ್ರ ಸುಮಾರು 30 ಸಾವಿರ ಕಿಮೀ ಹತ್ತಿರ ಬರುವುದರಿಂದ ಸುಮಾರು 14ಅಂಶ ದೊಡ್ಡದಾಗಿ ಕಂಡು ಸುಮಾರು 24 ಅಂಶದಷ್ಟು ಚಂದ್ರಪ್ರಭೆ ಹೆಚ್ಚಿರುತ್ತದೆ.

ಜುಲೈ 3ರಂದು ಚಂದ್ರ ಭೂಮಿಯಿಂದ 3,61800 ಕಿ.ಮೀ., ಆ.1ರಂದು 3,57530 ಕಿ.ಮೀ., ಆ.31ರಂದು 3,57,344 ಕಿ.ಮೀ. ಹಾಗೂ ಸೆ.೨೯ ರಂದು 3,61552 ಕಿ.ಮೀ. ದೂರ ಇರಲಿದೆ. ಸಮುದ್ರದ ಭರತ ಇಳಿತಗಳಿಗೆ ಚಂದ್ರನ ಆಕರ್ಷಣೆಯೂ ಕಾರಣ. ಹಾಗಾಗಿ ಸೂಪರ್ ಮೂನ್‌ಗಳಲ್ಲಿ ಸಮುದ್ರದ ತರೆಗಳ ಅಬ್ಬರ ಹೆಚ್ಚಿರುತ್ತದೆ ಎಂದು ಖಗೋಳ ಶಾಸ್ತ್ರಜ್ಞ ಡಾ.ಎ.ಪಿ.ಭಟ್ ಉಡುಪಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News