ಉಡುಪಿ: 10 ಮಹಡಿಯ ಕಿಟಕಿಯಲ್ಲಿ ಸಿಲುಕಿದ್ದ ಬಾಲಕನ ರಕ್ಷಣೆ
Update: 2023-07-11 00:01 IST
ಉಡುಪಿ: ನಗರದ ಬ್ರಹ್ಮಗಿರಿಯ ವಸತಿ ಸಮುಚ್ಛಯದ ಕಿಟಕಿ ಪೊರಂನಲ್ಲಿ ಸಿಲುಕಿಕೊಂಡಿದ್ದ ವಿಶೇಷ ಚೇತನ ಬಾಲಕನೋರ್ವನನ್ನು ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿರುವ ಘಟನೆ ಇಂದು ಬೆಳಗ್ಗೆ 11.45ರ ಸುಮಾರಿಗೆ ನಡೆದಿದೆ.
ರಕ್ಷಣೆಯಾದ ಬಾಲಕನನ್ನು ಆರುಷ್(8) ಎಂದು ಗುರುತಿಸಲಾಗಿದೆ. ವಸತಿ ಸಮುಚ್ಛಯದ 11ನೇ ಮಹಡಿಯ ಫ್ಲಾಟ್‌ನಲ್ಲಿರುವ ಈ ವಿಶೇಷ ಚೇತನ ಬಾಲಕ ಬೆಡ್‌ರೂಮಿಗೆ ಒಳಗಿನಿಂದ ಲಾಕ್ ಮಾಡಿ, ಬಾಲ್ಕನಿಯಲ್ಲಿರುವ ಕಿಟಕಿ ಮೂಲಕ 10ನೆ ಮಹಡಿಯ ಕಿಟಕಿಗೆ ಇಳಿದು ಸಿಲುಕಿಕೊಂಡಿದ್ದನು.
ಕೂಡಲೇ ಗಮನಿಸಿದ ಪೋಷಕರು ಕೂಡಲೇ ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಉಡುಪಿ ಅಗ್ನಿ ಶಾಮಕ ದಳದ ಠಾಣಾಧಿಕಾರಿ ಸತೀಶ್ ಎನ್. ನೇತೃತ್ವದ ಎಂಟು ಮಂದಿಯ ತಂಡ ಸುಮಾರು ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಅಪಾಯಕಾರಿ ಸ್ಥಿತಿಯಲ್ಲಿದ್ದ ಬಾಲಕನನ್ನು ರಕ್ಷಿಸಿದ್ದಾರೆ.